ನವದೆಹಲಿ/ಮುಂಬೈ, ಜು.26– ನವಿ ಮುಂಬೈನ ಸರಕು ಸಾಗಣೆ ಕೋಟ್ಯಂತರ ರೂ. ಮೌಲ್ಯದ 130 ಕೆ.ಜಿ. ಹೆರಾಯಿನ್ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಆಫ್ಘಾನಿಸ್ತಾನದ ಪ್ರಜೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆಫ್ಘಾನಿಸ್ತಾನದ 130 ಕೆ.ಜಿ. ಹೆರಾಯಿನ್ ಅನ್ನು 260 ಸೆಣಬು ಬ್ಯಾಗ್ಗಳಲ್ಲಿ ಬಚ್ಚಿಡಲಾಗಿತ್ತು.
ನವಿ ಮುಂಬೈ ಪೊಲೀಸರ ನೆರವಿನೊಂದಿಗೆ ದೆಹಲಿ ಪೊಲೀಸರು ಈ ಮಾಲನ್ನು ವಶಪಡಿಸಿಕೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತರಾದ (ವಿಶೇಷ ಘಟಕ) ಮಾನಿಷಿ ಚಂದ್ರ ತಿಳಿಸಿದ್ದಾರೆ.
ಆಫ್ಘಾನಿಸ್ತಾನದ ಫಿಲ್ಲಾ ಪ್ರದೇಶದಿಂದ ತುಳಸಿ ಬೀಜಗಳ ಸಾಗಣೆ ಸೋಗಿನಲ್ಲಿ ಇದನ್ನು ನವಿ ಮುಂಬೈಗೆ ಸಮುದ್ರ ಮಾರ್ಗವಾಗಿ ತರಲಾಗಿತ್ತು. ಖಚಿತ ಸುಳಿವಿನ ಮೇರೆಗೆ ಪೊಲೀಸರು ಆಫ್ಘನ್ ಪ್ರಜೆ ಸೇರಿದಂತೆ ಇಬ್ಬರನ್ನು ಬಂಧಿಸಿ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ದೆಹಲಿಗೆ ನಾಲ್ವರು ಆಫ್ಘನ್ ಪ್ರಜೆಗಳು ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಿ 200 ಕೆ.ಜಿ. ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.
ಒಟ್ಟು 330 ಕೆ.ಜಿ. ಹೆರಾಯಿನ್ ಮೌಲ್ಯ 1,320 ಕೋಟಿ ರೂ.ಗಳು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.