ನಮ್ಮನ್ನು ನಂಬಿ ಬಂದವರಿಗೆ ಅನ್ಯಾಯವಾಗಲು ಬಿಡಬಾರದು-ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ

ಬೆಂಗಳೂರು, ಜು.25- ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಬಂದು ಬಿಜೆಪಿಗೆ ಬೆಂಬಲ ನೀಡಲಿರುವ ಭಿನ್ನಮತೀಯ ಶಾಸಕರಿಗೆ ಏನೇ ಆದರೂ ಕಾನೂನಿನ ನೆರವು ನೀಡಬೇಕೆಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಸ್ಪಷ್ಟ ಸೂಚನೆ ಕೊಟ್ಟಿದೆ.

ಅವರ ರಾಜೀನಾಮೆಯನ್ನು ವಿಧಾನಸಭೆ ಸ್ಪೀಕರ್ ಅಂಗೀಕರಿಸಿದರೆ ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರೆ ಅವರಿಗೆ ಕಾನೂನಿನ ನೆರವು ನೀಡಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

ಪಕ್ಷವನ್ನು ನಂಬಿ ಬಂದವರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅವರಿಗೆ ಕಾನೂನಿನ ನೆರವು ನೀಡದಿದ್ದರೆ ನಾಳೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿ ನಂಬಿ ಹೋದವರಿಗೆ ಇದೇ ಗತಿ ಆಗಲಿದೆ ಎಂಬ ಅಪಪ್ರಚಾರ ನಡೆಸುತ್ತಾರೆ.ಹಾಗಾಗಿ ಕಾನೂನಿನ ಸಂಕಷ್ಟಕ್ಕೆ ಸಿಲುಕಿದರೆ ಅಗತ್ಯ ನೆರವು ನೀಡಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.
ವಿಪ್ ಉಲ್ಲಂಘನೆ ಆರೋಪದ ಮೇಲೆ ಶಾಸಕರನ್ನು ಸ್ಪೀಕರ್ ರಮೇಶ್‍ಕುಮಾರ್ ಅವರು ಅನರ್ಹಗೊಳಿಸಿದರೆ ತಕ್ಷಣವೇ ಅವರ ನಿರ್ಧಾರವನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಬೇಕು.ಇದಕ್ಕಾಗಿ ಸಮರ್ಥವಾಗಿ ಮಂಡಿಸುವ ವಕೀಲರೊಬ್ಬರನ್ನು ನೇಮಿಸುವಂತೆಯೂ ಸೂಚಿಸಲಾಗಿದೆ.

ಮೊದಲು ಹೈಕೋರ್ಟ್‍ನ ಏಕಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವುದು.ನಂತರ ದ್ವಿಸದಸ್ಯ ಪೀಠ, ಬಳಿಕ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೂ ಮೇಲ್ಮನವಿ ಅರ್ಜಿ ಸಲ್ಲಿಸಲು ಅಗತ್ಯ ಸಿದ್ದತೆಗಳನ್ನು ನಡೆಸುವಂತೆ ನಿರ್ದೇಶಲಾಗಿದೆ.

ಹೈಕೋರ್ಟ್‍ನಲ್ಲಿ ಸ್ಪೀಕರ್ ತೀರ್ಮಾನವನ್ನು ಎತ್ತಿಹಿಡಿದರೆ ನಂತರ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ ಹಾಗೂ ಮುಖ್ಯನ್ಯಾಯಮೂರ್ತಿಗಳ ಪೀಠಕ್ಕೂ ಸಲ್ಲಿಸಬೇಕು.ಒಂದು ವೇಳೆ ಅಲ್ಲಿಯೂ ನ್ಯಾಯ ಸಿಗದಿದ್ದರೆ ಸಾಂವಿಧಾನಿಕ ಪೀಠಕ್ಕೆ ಮೇಲ್ಮನವಿ ಹಾಕಲು ಸಜ್ಜಾಗಬೇಕು.ನಮ್ಮನ್ನು ನಂಬಿ ಬಂದವರಿಗೆ ಅನ್ಯಾಯ ವಾಗುವುದಿಲ್ಲ ಎಂಬುದನ್ನು ಈ ವಿಷಯದಲ್ಲೇ ತೋರಿಸಬೇಕೆಂದು ಹೈಕಮಾಂಡ್ ನಾಯಕರು ಸಲಹೆ ಮಾಡಿದ್ದಾರೆ.

ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರಿಗೆ ಕಾನೂನಿನ ನೆರವು ನೀಡುವ ಸಂಬಂಧ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂಪ್ಪನವರು ಈಗಾಗಲೇ ಕೆಲವು ಕಾನೂನು ತಜ್ಞರ ಸಲಹೆ ಪಡೆದಿದ್ದಾರೆ.
ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳಿ, ನಿವೃತ್ತ ರಾಜ್ಯಪಾಲ ಎಂ.ರಾಮಾಜೋಯಿಷ್, ಹಿರಿಯ ವಕೀಲರಾದ ಬಿ.ವಿ.ಆಚಾರ್ಯ ಸೇರಿದಂತೆ ಮತ್ತಿತರರಿಂದ ಕಾನೂನಿನ ನೆರವು ಪಡೆಯಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ