ಬೆಂಗಳೂರು,ಜು.25- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿ ಎರಡು ದಿನ ಕಳೆದರೂ ಹೊಸ ಸರ್ಕಾರ ರಚನೆಯ ನಿರ್ಧಿಷ್ಟ ಸ್ವರೂಪ ಕಂಡುಬರದ ಹಿನ್ನೆಲೆಯಲ್ಲಿ ಧನ ವಿನಿಯೋಗ ವಿಧೇಯಕ ಅಂಗೀಕಾರದ ಚರ್ಚೆಯೇ ಪ್ರಮುಖ ವಸ್ತುವಾಗಿದೆ.
ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ರಾಜ್ಯದ ಧನ ವಿನಿಯೋಗ ವಿಧೇಯಕ ಸಂಸತ್‍ನಲ್ಲಿ ಅಂಗೀಕಾರ ಪಡೆಯುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ.
ಆಗಸ್ಟ್ 1ರಿಂದ ಸರ್ಕಾರಿ ನೌಕರರ ವೇತನ, ಸರ್ಕಾರಿ ಕಾರ್ಯಕ್ರಮಗಳಿಗೆ ಅನುದಾನ ಸೇರಿದಂತೆ ರಾಜ್ಯ ಸರ್ಕಾರದ ಯಾವುದೇ ಹಣಕಾಸಿನ ವ್ಯವಹಾರ ನಡೆಸಲು ಧನ ವಿನಿಯೋಗ ವಿಧೇಯಕಕ್ಕೆ ವಿಧಾನ ಮಂಡಲದ ಉಭಯ ಸದನದ ಅನುಮೋದನೆ ಬೇಕಾಗಿದೆ. ಉಸ್ತುವಾರಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ವೇಳೆ ಜು.31ರವರೆಗೆ ಮಾತ್ರ ಲೇಖಾನುದಾನ ಪಡೆದಿದ್ದರು. ಅಲ್ಲಿಯವರೆಗೆ ಸರ್ಕಾರದ ಆಡಳಿತ ಯಂತ್ರ ನಡೆಸಲು ತೊಂದರೆಯಾಗುವುದಿಲ್ಲ. ಆದರೆ ಆಗಸ್ಟ್‍ನಿಂದ ತೊಂದರೆಯಾಗಲಿದೆ.
ಹಾಗಾಗಿ ಉನ್ನತಾಧಿಕಾರಿಗಳು ಏನಾಗುವುದು ಎಂಬ ಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. ಬಿಜೆಪಿ ಸರ್ಕಾರ ರಚನೆ ಮಾಡಿದರೆ ಹಣಕಾಸು ವಿಧೇಯಕದ ಅನುಮೋದನೆ ಪಡೆಯುವ ತುರ್ತು ಅನಿವಾರ್ಯತೆ ಬೀಳಲಿದೆ.
ನಾಳೆಯೊಳಗೆ ಹೊಸ ಸರ್ಕಾರ ರಚನೆಯಾಗದಿದ್ದರೆ ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ಇದೆ.ಮುಂದಿನ ವಾರ ಕೇವಲ ಮೂರೇ ದಿನಗಳು ಮಾತ್ರ ಉಳಿಯುತ್ತದೆ.ಅಷ್ಟರಲ್ಲಿ ನೂತನ ಸರ್ಕಾರ ವಿಧೇಯಕಕ್ಕೆ ಅನುಮೋದನೆ ಪಡೆಯಬೇಕಾಗುತ್ತದೆ.ತ್ವರಿತವಾಗಿ ಸರ್ಕಾರ ರಚನೆ ಪ್ರಕ್ರಿಯೆ ಸಾಧ್ಯವಾಗದೇ ವಿಳಂಬವಾದರೆ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಒಂದು ವೇಳೆ ಜುಲೈ 31ರೊಳಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾದರೆ ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದ್ದು ಕೇಂದ್ರ ಸರ್ಕಾರ ಸಂಸತ್‍ನಲ್ಲಿ ರಾಜ್ಯದ ಧನ ವಿನಿಯೋಗ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.