ಬೆಂಗಳೂರು, ಜು.25-ನೀರಿನ ಮಿತಬಳಕೆ ಮತ್ತು ಪ್ಲಾಸ್ಟಿಕ್ ಬಳಕೆ ನಿಷೇಧ, ನಗರದ ಸ್ವಚ್ಛತೆ ಕುರಿತು ಮೇಯರ್ ಗಂಗಾಂಬಿಕೆ ಪೂರ್ವ ವಲಯದ ಎಲ್ಲಾ ಶಾಲಾ ಮುಖ್ಯಸ್ಥರುಗಳ ಸಭೆ ನಡೆಸಿ ಅಗತ್ಯ ಸಲಹೆಗಳನ್ನು ನೀಡಿದರು.
ಈ ವೇಳೆ ಮಾತನಾಡಿದ ಮೇಯರ್ ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಶಿಕ್ಷಕರು ಮಕ್ಕಳಲ್ಲಿ ಅರಿವು ಮೂಡಿಸಿದರೆ ಮುಂದೆ ಅವರು ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುತ್ತಾರೆ. ಆಗಸ್ಟ್ 3 ರಿಂದ ಪೂರ್ವವಲಯದಲ್ಲಿ ಶಾಲಾ ಮಕ್ಕಳೊಂದಿಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮಕ್ಕಳು ಶಾಲೆಯಲ್ಲೇ ಹೆಚ್ಚು ಸಮಯ ಇರುತ್ತಾರೆ. ಶಿಕ್ಷಕರು ಹೇಳುವ ವಿಷಯವನ್ನು ಗ್ರಹಿಸುವುದಲ್ಲದೆ, ಚಾಚೂತಪ್ಪದೆ ಅವುಗಳನ್ನು ಪಾಲನೆ ಮಾಡುತ್ತಾರೆ. ಆದ್ದರಿಂದ ಪ್ಲಾಸ್ಟಿಕ್ ಮುಕ್ತ ಬೆಂಗಳೂರು ಮಾಡಲು ಈಗಿನಿಂದಲೇ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.
ಇನ್ನೇನು ಗೌರಿ-ಗಣೇಶ ಹಬ್ಬ ಬರಲಿದೆ. ಈಗಿನಿಂದಲೇ ಮಣ್ಣಿನ ಮೂರ್ತಿಗಳನ್ನು ಬಳಸುವಂತೆ ಮಕ್ಕಳಿಗೆ ತಿಳಿಸಿಕೊಟ್ಟರೆ ಅವರು ತಮ್ಮ ಪೋಷಕರಲ್ಲಿ ಅಂತಹ ಮೂರ್ತಿಗಳನ್ನೇ ತರಿಸುತ್ತಾರೆ. ಸರಿಯಾಗಿ ಮಳೆ ಬಾರದೆ ನಗರದ ಯಾವುದೇ ಕೆರೆಗಳಲ್ಲಿ ನೀರಿಲ್ಲ. ಇಂತಹ ಸಂದರ್ಭ ಬಣ್ಣದ ಗೌರಿ-ಗಣೇಶ ಮೂರ್ತಿಗಳನ್ನು ಕೆರೆಗೆ ಬಿಟ್ಟರೆ ಅವು ಕರಗುವುದಿಲ್ಲ ಎಂದು ಹೇಳಿದರು.
ನೀರನ್ನು ಮಿತವಾಗಿ ಬಳಸಬೇಕು. ಡೇಂಘಿ, ಚಿಕೂನ್ಗುನ್ಯಾ ಮತ್ತಿತರ ರೋಗಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಶಾಲಾ ಮುಖ್ಯಸ್ಥರಿಗೆ ಗಂಗಾಂಬಿಕೆ ಸೂಚಿಸಿದರು.
ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದ್ದು, ಇದುವರೆಗೂ 13 ಕ್ವಿಂಟಾಲ್ ಪ್ಲಾಸ್ಟಿಕ್ ಜಪ್ತಿ ಮಾಡಿ 25 ಲಕ್ಷ ರೂ.ಗಳಿಗೂ ಹೆಚ್ಚು ದಂಡ ವಿಧಿಸಲಾಗಿದೆ.ಆ.1 ರಿಂದ ಪ್ಲಾಸ್ಟಿಕ್ ಬಳಕೆ ಮಾಡುವುದು ಇನ್ನೂ ಮುಂದುವರೆದರೆ ಅಂಥವರಿಗೆ 5 ಪಟ್ಟು ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ಉದ್ಯಾನವನಗಳು, ಪಾಲಿಕೆ ಕಚೇರಿಗಳ ಆವರಣದಲ್ಲಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದೇ ರೀತಿ ಎಲ್ಲರೂ ಕಟ್ಟಡ ನಿರ್ಮಾಣ ವೇಳೆ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿದರೆ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಕುಡಿಯುವ ನೀರನ್ನು ದುರ್ಬಳಕೆ ಮಾಡಬಾರದು ಎಂದು ಸಲಹೆ ನೀಡಿದರು.
ದಕ್ಷಿಣ ವಲಯದ ಎಲ್ಲಾ 44 ವಾರ್ಡ್ಗಳಲ್ಲಿ ಶಾಲಾ ಮಕ್ಕಳ ಸಹಯೋಗದಲ್ಲಿ ಜಾಥಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಸೊಳ್ಳೆ ನಿಯಂತ್ರಣ, ಸ್ವಚ್ಛತೆ, ಕುಡಿಯುವ ನೀರಿನ ಸದ್ಬಳಕೆ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲಾಗಿದೆ. ಅದೇ ರೀತಿ ಪಶ್ಚಿಮ ವಲಯದಲ್ಲಿ ಇದೇ ಶನಿವಾರ ಜಾಥಾ ಆಯೋಜಿಸಲಾಗುವುದು ಎಂದು ಹೇಳಿದರು.
ಎಲ್ಲಾ ವಾರ್ಡ್ಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಪಾಲಿಕೆ ಸಿಬ್ಬಂದಿ ಫಾಗಿಂಗ್ ಮಾಡಬೇಕು, ಮನೆಗಳ ಮುಂದೆ ಉದ್ಯಾನವನ, ಗಿಡ ಮರಗಳಿರುವ ಕಡೆ ಔಷಧಿ ಸಿಂಪಡಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ಸೆಪ್ಟೆಂಬರ್ 1 ರಿಂದ ಹಸಿ ಕಸ, ಒಣ ಕಸ ಬೇರ್ಪಡಿಸಿ ನೀಡದಿದ್ದರೆ ಸಾರ್ವಜನಿಕರಿಗೆ ಭಾರೀ ದಂಡ ವಿಧಿಸಲಾಗುತ್ತದೆ ಎಂದು ಇದೇ ವೇಳೆ ಅವರು ಎಚ್ಚರಿಸಿದರು.
ಪಾಲಿಕೆ ಆರೋಗ್ಯಾಧಿಕಾರಿಗಳು, ಪೂರ್ವ ವಲಯದ ಎಲ್ಲಾ ಶಾಲಾ ಮುಖ್ಯಸ್ಥರು, ಮುಖ್ಯ ಇಂಜಿನಿಯರ್ಗಳು , ಜಂಟಿ ಆಯುಕ್ತರು, ಸ್ಥಳೀಯ ಪಾಲಿಕೆ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.