
ಬೆಂಗಳೂರು, ಜು.24-ಸರ್ಕಾರವೇ ವಿಶ್ವಾಸ ಮತಯಾಚನೆಯಲ್ಲಿ ಬಿದ್ದು ಹೋಗಿರುವುದರಿಂದ ತಕ್ಷಣವೇ ವಿಧಾನಸಭೆ ಸ್ಪೀಕರ್ ರಮೇಶ್ಕುಮಾರ್ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಯಡಿಯೂರಪ್ಪ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ಗಮಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸ ಮತಯಾಚನೆಯಲ್ಲಿ ಆಡಳಿತಾರೂಢ ಸರ್ಕಾರಕ್ಕೆ ಸೋಲಾಗಿದೆ.ಈ ಹಿನ್ನೆಲೆಯಲ್ಲಿ ಸ್ಪೀಕರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಸರ್ಕಾರವೇ ಅಸ್ತಿತ್ವದಲ್ಲಿ ಇಲ್ಲದಿರುವಾಗ ಸ್ಪೀಕರ್ ಮುಂದುವರೆಯುವುದು ನೈತಿಕವಾಗಿ ಸರಿಯಲ್ಲ. ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹೆಚ್ಚು ದಿನ ಮುಂದುವರೆಯದೆ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡುವ ವಿಶ್ವಾಸ ನಮಗಿದೆ ಎಂದರು.
ಸಮ್ಮಿಶ್ರ ಸರ್ಕಾರ ಅಧಿಕಾರದಿಂದ ನಿರ್ಗಮಿಸಬೇಕೆಂಬುದು ಬಹುತೇಕ ಜನರ ಅಭಿಪ್ರಾಯವಾಗಿತ್ತು.ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕೆಂಬುದು ರಾಜ್ಯದ ಜನತೆಯ ಆಶಯವಾಗಿತ್ತು.ಕಳೆದ ವಿಧಾನಸಭೆ ಚುನಾವಣೆ ವೇಳೆ ನಮಗೆ ಕೂದಲೆಳೆ ಅಂತರದಲ್ಲಿ ಬಹುಮತ ಸಿಕ್ಕಿರಲಿಲ್ಲ. ಕಾಂಗ್ರೆಸ್-ಜೆಡಿಎಸ್ ಶಾಸಕರು ತಮ್ಮದೇ ಆದ ಕಾರಣಗಳಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಇದಕ್ಕೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.