ಶಾಸಕರ ಸಭೆ ನಡೆಸಿದ ಜೆಡಿಎಸ್ ನಾಯಕರು

ಬೆಂಗಳೂರು, ಜು.24-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉಸ್ತುವಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆ.ಪಿ.ಭವನದಲ್ಲಿಂದು ನಡೆದ ಜೆಡಿಎಸ್ ಶಾಸಕರ ಸಭೆಯಲ್ಲಿ ಪಕ್ಷ ಸಂಘಟನೆ ಸೇರಿದಂತೆ ಇನ್ನಿತರ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾದ ಬೆನ್ನಲ್ಲೇ ಶಾಸಕರ ಸಭೆ ನಡೆಸಿದ ಜೆಡಿಎಸ್ ನಾಯಕರು ಪಕ್ಷ ಸಂಘಟನೆಗೆ ಮುಂದಾಗುವಂತೆ ಸಲಹೆ ಮಾಡಲಾಗಿದೆ.

ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಆಗುವ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ಕೈಗೊಳ್ಳೋಣ. ಸರ್ಕಾರ ಕಳೆದುಕೊಂಡ ಮಾತ್ರಕ್ಕೆ ಯಾರೂ ಧೈರ್ಯಗುಂದಬೇಕಿಲ್ಲ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಎಲ್ಲರೂ ಪ್ರಯತ್ನಿಸಬೇಕು, ಜೊತೆಗೆ ಪಕ್ಷದ ಒಗ್ಗಟ್ಟಿಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟ ಅನಿವಾರ್ಯ.ಈ ದಿಸೆಯಲ್ಲಿ ಕಾರ್ಯಕರ್ತರು ಸಕ್ರಿಯರಾಗಬೇಕು ಎಂದು ತಿಳಿಸಲಾಯಿತು.
ಶಾಸಕರ ರಾಜೀನಾಮೆ ನಂತರ ನಡೆದ ರಾಜಕೀಯ ಬೆಳವಣಿಗೆಗಳು, ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆ ಪ್ರಯತ್ನಗಳು, ಕಾಂಗ್ರೆಸ್ ನಾಯಕರು ನೀಡಿದ ಸಹಕಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ ಇನ್ನೂ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ. ಯಾವ ರೀತಿಯ ತೀರ್ಪು ಬರುತ್ತದೆ ಎಂಬುದನ್ನು ಕಾದುನೋಡೋಣ. ಅಲ್ಲದೆ, ವಿಪ್ ಉಲ್ಲಂಘನೆ ಸಂಬಂಧಿಸಿದಂತೆ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮಕೈಗೊಳ್ಳುವಂತೆ ನೀಡಿರುವ ದೂರು, ಸಭಾಧ್ಯಕ್ಷರ ಅಂಗಳದಲ್ಲಿದೆ. ಆ ಬಗ್ಗೆ ಸಭಾಧ್ಯಕ್ಷರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದುನೋಡಿ ಮುಂದಿನ ನಿರ್ಧಾರ ಕೈಗೊಳ್ಳೋಣ.ಇದುವರೆಗೂ ಒಗ್ಗಟ್ಟಿನಿಂದಿದ್ದು, ಸಹಕರಿಸಿದ್ದಕ್ಕೆ ಧನ್ಯವಾದವನ್ನು ಸಲ್ಲಿಸಿದ ನಾಯಕರು ಇನ್ನು ಮುಂದೆಯೂ ಒಗ್ಗಟ್ಟಿನಿಂದ ಇದ್ದು, ಯಾವುದೇ ಸಮಸ್ಯೆ, ಸವಾಲು ಎದುರಾದರೂ ಒಟ್ಟಾಗಿ ಹೋರಾಟ ನಡೆಸೋಣ.ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಮುಂಬರುವ ಚುನಾವಣೆಗೆ ಸಜ್ಜುಗೊಳಿಸುವ ಕಡೆಗೆ ಗಮನಹರಿಸಬೇಕು.ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಹೋರಾಟ ಮಾಡುವ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸೋಣ ಎಂಬ ಸಲಹೆ ಮಾಡಿದ್ದಾರೆ.
ಯಾವುದೇ ಅಸಮಾಧಾನ ಇಟ್ಟುಕೊಳ್ಳದೆ ಮುಂದುವರೆಯಬೇಕಿದೆ.ರಾಜಕೀಯದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ಸೂಚನೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ