ಬೆಂಗಳೂರು, ಜು.24- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾದ ನಂತರವೂ ಕಾಂಗ್ರೆಸ್‍ಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಮ್ಮ ಪಕ್ಷದ ಸಂಘಟನೆ ಮಾಡಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನೊಂದಿಗಿನ ಮೈತ್ರಿ ವಿಚಾರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ನಿನ್ನೆ ಮೈತ್ರಿ ಸರ್ಕಾರ ಅಂತ್ಯವಾಗಿದೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಮಾಜಿ ಸಚಿವ ಹಾಗೂ ಎಲ್ಲಾ ಶಾಸಕರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದ್ದು , ಮುಂದಿನ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಪ್ರಾದೇಶಿಕ ಪಕ್ಷ ಬಲಗೊಳಿಸುವುದು ನಮ್ಮ ಮುಂದಿನ ಆದ್ಯತೆ ಎಂದು ಹೇಳಿದರು.
ನಮ್ಮ ಪಕ್ಷದ ಮೂವರು ಶಾಸಕರು ರಾಜೀನಾಮೆ ನೀಡಿದ್ದು ಅಧಿವೇಶನಕ್ಕೂ ಹಾಜರಾಗಿಲ್ಲ. ಈ ಬಗ್ಗೆ ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ್ದು ಅವರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ನಿನ್ನೆ ಮೈತ್ರಿ ಸರ್ಕಾರ ಪತನವಾಗಿದೆ. ಈಗ ನಮ್ಮ ಸರ್ಕಾರವಿಲ್ಲ. ಆದರೆ ರಾಜ್ಯಾದ್ಯಂತ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮೈತ್ರಿ ಸರ್ಕಾರ ನೀಡಿದ ಕಾರ್ಯಕ್ರಮಗಳ ಆಧಾರದ ಮೇಲೆ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.
ರಾಜೀನಾಮೆ ನೀಡಿ ಸದನಕ್ಕೆ ಹಾಜರಾಗದ ಮೂವರು ಪಕ್ಷದ ಶಾಸಕರ ವಿರುದ್ಧ ಅವರನ್ನು ಅನರ್ಹಗೊಳಿಸುವಂತೆ ಈಗಾಗಲೇ ಸಭಾಧ್ಯಕ್ಷರಿಗೆ ದೂರು ನೀಡಿದ್ದು , ಸಭಾಧ್ಯಕ್ಷರು ಕೈಗೊಳ್ಳುವ ತೀರ್ಪನ್ನು ಕಾಯುತ್ತಿದ್ದೇವೆ ಎಂದು ಹೇಳಿದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಚಾರದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಕಾಂಗ್ರೆಸ್‍ನೊಂದಿಗಿನ ಮೈತ್ರಿ ಮುಂದುವರೆಸುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಈಗಲೂ ಉಭಯ ಪಕ್ಷಗಳ ನಡುವೆ ದೋಸ್ತಿ ಇದ್ದು ಮುಂದುವರೆಯುವ ಆಶಾ ಭಾವನೆ ಇದೆ ಎಂದರು.
ಬಿಜೆಪಿ ಸರ್ಕಾರ ಎಷ್ಟು ದಿನ ಸುಭದ್ರವಾಗಿರಲಿದೆ ಎಂಬುದು ಆ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ.ಮೈತ್ರಿ ಸರ್ಕಾರದ ಜನಪರ ಕಾರ್ಯಕ್ರಮ ಗಳನ್ನು ಮುಂದುವರೆಸಬೇಕು.ಇಲ್ಲದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದರು.
ಉಸ್ತುವಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಮಾಜಿ ಸಚಿವರು, ಶಾಸಕರು, ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು.