ಯಡಿಯೂರಪ್ಪನವರ ನಿವಾಸದಲ್ಲಿ ನಡೆದ ಬಿರುಸಿನ ರಾಜಕೀಯ ಚಟುವಟಿಕೆ

ಬೆಂಗಳೂರು, ಜು.24-ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಇಂದು ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದವು.
ಡಾಲರ್ಸ್ ಕಾಲೋನಿಯಯಡಿಯೂರಪ್ಪ ನಿವಾಸದಲ್ಲಿ ಬೆಳಗಿನಿಂದಲೇ ಪಕ್ಷದ ಶಾಸಕರು, ಮುಖಂಡರು, ಹಿತೈಷಿಗಳು, ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಆಗಮಿಸಿ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.

ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‍ರಾವ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮುಖಂಡರಾದ ಆರ್.ಅಶೋಕ್, ಜೆ.ಸಿ.ಮಾಧುಸ್ವಾಮಿ, ಬಸವರಾಜಬೊಮ್ಮಾಯಿ, ಎಂ.ಪಿ.ರೇಣುಕಾಚಾರ್ಯ, ವಿ.ಸೋಮಣ್ಣ, ಚಂದ್ರಪ್ಪ, ಹಾಲಪ್ಪ ಆಚಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಯಾವ ದಿನದಂದು ವಿಶ್ವಾಸ ಮತಯಾಚನೆ ಮಾಡುವುದು,ಮೊದಲ ಹಂತದಲ್ಲಿ ಯಾರ್ಯಾರು ಪ್ರಮಾಣ ವಚನ ಸ್ವೀಕರಿಸಬೇಕು, ಸದನದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಲಾಯಿತು.

ದೆಹಲಿ ನಾಯಕರ ಜೊತೆ ಮುರಳೀಧರ್‍ರಾವ್, ಬಸವರಾಜಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ ನಿರಂತರ ಸಂಪರ್ಕದಲ್ಲಿದ್ದು, ವೀಕ್ಷಕರಾಗಿ ಪ್ರಮುಖರೊಬ್ಬರನ್ನು ಕಳುಹಿಸಿಕೊಡುವಂತೆ ಕೋರಿದ್ದಾರೆ.
ದೆಹಲಿಯಿಂದ ಯಾವುದೇ ಸಂದರ್ಭದಲ್ಲೂ ವೀಕ್ಷಕರು ಆಗಮಿಸುವ ಸಾಧ್ಯತೆಗಳು ಹೆಚ್ಚಾಗಿದ್ದು, ಬಳಿಕ ಶಾಸಕಾಂಗ ಸಭೆ ನಡೆಯಲಿದೆ.ಇದರ ಜೊತೆಗೆ ಸಂಪುಟಕ್ಕೆ ಯಾರ್ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕು, ಪ್ರದೇಶವಾರು, ಜಾತಿ, ಪ್ರಾದೇಶಿಕತೆ, ಸೇವಾ ಹಿರಿತನ ಸೇರಿದಂತೆ ಮತ್ತಿತರ ಕಾರ್ಯತಂತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಅಭಿನಂದನೆಗಳ ಮಹಾಪೂರ:
ಯಡಿಯೂರಪ್ಪನವರ ನಿವಾಸಕ್ಕೆ ಜಿಲ್ಲೆಯ ನಾನಾ ಭಾಗದಿಂದ ಮುಖಂಡರು ಆಗಮಿಸಿ ಶುಭ ಕೋರಿದರು. ಶಿವಮೊಗ್ಗ, ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ, ಮೈಸೂರು, ಮಂಡ್ಯ ಸೇರಿದಂತೆ ನಾನಾ ಜಿಲ್ಲೆಗಳಿಂದ ನೂರಾರು ಸಂಖ್ಯೆಯ ಕಾರ್ಯಕರ್ತರು ಬಿಎಸ್‍ವೈ ಅವರಿಗೆ ಅಭಿನಂದಿಸಲು ಆಗಮಿಸಿದ್ದರು.
ಅಭಿಮಾನಿಗಳು ಹೂಗುಚ್ಛ ನೀಡಿ ಸಿಹಿ ಹಂಚಿ ಜೈಕಾರ ಕೂಗಿ ಸಂಭ್ರಮಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ