ಬೆಂಗಳೂರು, ಜು.24-ಸರ್ಕಾರ ರಚನೆ ಆರಂಭಕ್ಕೂ ಮುನ್ನವೇ ಬಿಜೆಪಿಯಲ್ಲಿ ಮಂತ್ರಿ ಹುದ್ದೆ ಗಿಟ್ಟಿಸಲು ಭರ್ಜರಿ ಲಾಬಿ ಆರಂಭವಾಗಿದೆ.
ನಾಳೆ ಅಥವಾ ನಾಳಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವರು.ನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಇದರ ಸುಳಿವು ಅರಿತಿರುವ ಸಚಿವ ಸ್ಥಾನದ ಆಕಾಂಕ್ಷಿಗಳು ಈಗಾಗಲೇ ಯಡಿಯೂರಪ್ಪ , ಆರ್‍ಎಸ್‍ಎಸ್ ಸೇರಿದಂತೆ ತಮ್ಮ ತಮ್ಮ ಗಾಡ್‍ಫಾದರ್‍ಗಳ ಮೂಲಕ ಸಚಿವ ಸ್ಥಾನ ಅಲಂಕರಿಸಲು ತೆರೆ ಮರೆಯಲ್ಲಿ ಲಾಬಿ ಮಾಡುತ್ತಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳು ಎಡತಾಕುತ್ತಿದ್ದ ದೃಶ್ಯ ಕಂಡು ಬಂತು.
ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿರುವುದರಿಂದ ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದೇ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಬಂದಿರುವ ಶಾಸಕರಿಗೂ ಈ ಬಾರಿ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕಾಗಿರುವುದರಿಂದ ಯಾರನ್ನು ಬಿಟ್ಟು ಯಾರಿಗೆ ಮಂತ್ರಿ ಸ್ಥಾನ ಕೊಡಬೇಕೆಂಬುದೇ ಸಮಸ್ಯೆಯಾಗಿದೆ.ಪ್ರದೇಶವಾರು, ಹಿರಿತನ, ಜಾತಿ, ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಮಾನದಂಡವಾಗಿಟ್ಟುಕೊಂಡೇ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆರ್‍ಎಸ್‍ಎಸ್ ಮತ್ತು ಹೈಕಮಾಂಡ್ ಸೂಚನೆ ನೀಡಿದೆ.
ಸಂಪುಟಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದನ್ನು ಈ ಬಾರಿ ಕೇಂದ್ರ ವರಿಷ್ಠರೇ ನಿರ್ಧರಿಸಲಿದ್ದು, ಯಡಿಯೂರಪ್ಪ ಅತೃಪ್ತ ಶಾಸಕರ ಪೈಕಿ ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬುದನ್ನು ನಿರ್ಧರಿಸಲಿದ್ದಾರೆ.
ಬಿಜೆಪಿ ಪಾಲಿನ ಸ್ಥಾನಗಳು ಹಾಗೂ ಖಾತೆಗಳನ್ನು ಹೈಕಮಾಂಡ್ ನಾಯಕರೇ ನಿರ್ಧರಿಸುತ್ತಿರುವುದರಿಂದ ಯಾರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆÉ.
ಈ ಬಾರಿ ಯಡಿಯೂರಪ್ಪ ಸಂಪುಟದಲ್ಲಿ ಬೆಂಗಳೂರಿಗೆ ಸಿಂಹಪಾಲು ಸಿಗುವ ನಿರೀಕ್ಷೆ ಇದೆ. ಶಾಸಕ ಸ್ಥಾನ ತ್ಯಾಗ ಮಾಡಿ ಹೊರ ಬಂದಿರುವ ಭೆರತಿ ಬಸವರಾಜ್, ಮುನಿರತ್ನ, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಬಿಜೆಪಿಯಿಂದ ಆರ್.ಅಶೋಕ್, ವಿ.ಸೋಮಣ್ಣ, ಡಾ.ಅಶ್ವತ್ಥನಾರಾಯಣ, ಎಸ್.ಆರ್.ವಿಶ್ವನಾಥ್, ಸತೀಶ್‍ರೆಡ್ಡಿ, ಅರವಿಂದಲಿಂಬಾವಳಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ತುಮಕೂರಿನಿಂದ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ, ಚಿತ್ರದುರ್ಗದಿಂದ ಹೊಳಲ್ಕೆರೆ ಚಂದ್ರಪ್ಪ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಆಕಾಂಕ್ಷಿಯಾಗಿದ್ದಾರೆ.
ವಿಜಯನಗರದ ಆನಂದ್‍ಸಿಂಗ್ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಮೈಸೂರಿನಿಂದ ಮಾಜಿ ಸಚಿವರಾದ ಎ.ರಾಮದಾಸ್, ಎಚ್.ವಿಶ್ವನಾಥ್, ಶಿವಮೊಗ್ಗದಿಂದ ಕೆ.ಎಸ್.ಈಶ್ವರಪ್ಪ, ಅರಗ ಜ್ಞಾನೇಂದ್ರ, ದಾವಣಗೆರೆಯಿಂದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಹಾವೇರಿಯಿಂದ ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ್, ಸಿ.ಎಂ.ಉದಾಸಿ, ನೆಹರೂ ಓಲೇಕರ್ ಆಕಾಂಕ್ಷಿಯಾಗಿದ್ದಾರೆ.
ಧಾರವಾಡದಿಂದ ಶಂಕರ್‍ಪಟೇಲ್ ಮುನೇನಕೊಪ್ಪ, ಬೆಳಗಾವಿಯಿಂದ ಉಮೇಶ್‍ಕತ್ತಿ, ರಮೇಶ್‍ಜಾರಕಿ ಹೊಳಿ, ಬಾಲಚಂದ್ರ ಜಾರಕಿಹೊಳಿ ನಡುವೆ ಬಿರುಸಿನ ಸ್ಪರ್ಧೆ ಇದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶ್ವೇಶರ ಹೆಗಡೆ ಕಾಗೇರಿ, ಶಿವರಾಮ್ ಹೆಬ್ಬಾರ್, ಉಡುಪಿಯಿಂದ ಕೋಟಾ ಶ್ರೀನಿವಾಸಪೂಜಾರಿ, ವಿ.ಸುನೀಲ್‍ಕುಮಾರ್, ಕುಂದಾಪುರದ ಹಾಲಾಡಿ ಶ್ರೀನಿವಾಸಶೆಟ್ಟಿ, ದಕ್ಷಿಣ ಕನ್ನಡದಿಂದ ಸುಳ್ಯಾದ ಅಂಗಾರ, ಮಡಿಕೇರಿಯಿಂದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಮಂತ್ರಿ ಸ್ಥಾನ ನೀಡುವಂತೆ ಒತ್ತಡ ಹಾಕಿದ್ದಾರೆ.
ಕೊಪ್ಪಳದಲ್ಲಿ ಹಾಲಪ್ಪ ಆಚಾರ್, ರಾಯಚೂರಿನಲ್ಲಿ ಪ್ರತಾಪ್‍ಗೌಡ ಪಾಟೀಲ್, ಶಿವನಗೌಡ ನಾಯಕ್, ಶಿವರಾಜ್‍ಪಾಟೀಲ್, ಯಾದಗಿರಿಯಿಂದ ರಾಜೂಗೌಡ ನಾಯ್ಕ್, ವಿಜಯಪುರದಲ್ಲಿ ಕೇಂದ್ರದ ಮಾಜಿ ಸಚಿವ ಬಸವನಗೌಡಪಾಟೀಲ್ ಯತ್ನಾಳ್, ಬೀದರ್‍ನಲ್ಲಿ ಮೇಲ್ಮನೆ ಸದಸ್ಯ ರಘುನಾಥ್ ಮಲ್ಕಾಪುರೆ, ಕಲಬುರಗಿಯಲ್ಲಿ ದತ್ತಾತ್ರೇಯ ಪಾಟೀಲ ರೇವೂರ, ಬಾಗಲಕೋಟೆಯಲ್ಲಿ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ವೀರಣ್ಣ ಚರಂತಿ ಮಠ, ಚಿಕ್ಕಮಗಳೂರಿನಿಂದ ಸಿ.ಟಿ.ರವಿ ಹಾಗೂ ಮಹಿಳಾ ಕೋಟಾದಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಆಕಾಂಕ್ಷಿಯಾಗಿದ್ದಾರೆ.
ಆದರೆ ಈ ಬಾರಿ ಅತೃಪ್ತರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕಾಗಿರುವುದರಿಂದ ಯಾರು ಎಷ್ಟೇ ಲಾಬಿ ನಡೆಸಿದರೂ ಹಿರಿಯರು ಮತ್ತು ಕೆಲವು ಹೊಸ ಮುಖಗಳನ್ನೊಳಗೊಂಡ ಸಂಪುಟವನ್ನು ವಿಸ್ತರಣೆ ಮಾಡಲು ಹೈಕಮಾಂಡ್ ಮುಂದಾಗಿದೆ.
ಸದನದಲ್ಲಿ ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸುವುದು ಅಗತ್ಯವಾಗಿರುವುದರಿಂದ ಮಾಧುಸ್ವಾಮಿ, ಬಸವರಾಜಬೊಮ್ಮಾಯಿ, ಉಮೇಶ್‍ಕತ್ತಿ, ಈಶ್ವರಪ್ಪ, ಅಶೋಕ್, ಗೋವಿಂದಕಾರಜೋಳ, ಶ್ರೀರಾಮುಲು, ಉಮೇಶ್‍ಕತ್ತಿ, ಸುರೇಶ್‍ಕುಮಾರ್ ಅಂಥವರು ಬಹುತೇಕ ಸಚಿವರಾಗುವುದು ಖಾತರಿಯಾಗಿದೆ.