ಬಿಬಿಎಂಪಿಯಲ್ಲೂ ಮೈತ್ರಿ ಆಡಳಿತ ಅಂತ್ಯ

ಬೆಂಗಳೂರು, ಜು.24- ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಳ್ಳುತ್ತಿದ್ದಂತೆ ಬಿಬಿಎಂಪಿಯಲ್ಲೂ ಮೈತ್ರಿ ಆಡಳಿತ ಅಂತ್ಯಗೊಳ್ಳುವುದು ನಿಚ್ಚಳವಾಗಿದ್ದು, ಇದೇ ಸೆಪ್ಟೆಂಬರ್‍ನಲ್ಲಿ ನಡೆಯಲಿರುವ ಕೊನೆ ಅವಧಿಯ ಮೇಯರ್ ಸ್ಥಾನ ಬಿಜೆಪಿಗೆ ಒಲಿಯಲಿದೆ.
ಬಿಬಿಎಂಪಿಯಲ್ಲೂ ಬಿಜೆಪಿ 101 ಸ್ಥಾನಗಳನ್ನು ಹೊಂದಿದ್ದರೂ ಕೂಡ ಕಾಂಗ್ರೆಸ್-ಜೆಡಿಎಸ್‍ನವರು ಏಳು ಮಂದಿ ಪಕ್ಷೇತರರು, ಶಾಸಕರು, ಸಂಸದರ ಮತಗಳನ್ನು ಸೇರಿಸಿಕೊಂಡು ಅಧಿಕಾರಕ್ಕೆ ಬಂದರು.ನಾಲ್ಕು ವರ್ಷ ಅವರ ಪಕ್ಷದವರು ಮೇಯರ್ ಆಗಿದ್ದಾರೆ.

ಕಾಂಗ್ರೆಸ್‍ನಿಂದ ಮೇಯರ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ, ಮುನಿರತ್ನ ಅವರು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಗುಡ್‍ಬೈ ಹೇಳಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ.ಇದರ ಜತೆ ಗೋಪಾಲಯ್ಯ ಕೂಡ ಜೆಡಿಎಸ್ ತೊರೆದಿರುವುದು ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವ ಹಿನ್ನೆಲೆಯಲ್ಲಿ ಇದುವರೆಗೆ ಕಾಂಗ್ರೆಸ್-ಜೆಡಿಎಸ್‍ನೊಂದಿಗೆ ಕೈ ಜೋಡಿಸಿದ್ದ ಏಳು ಮಂದಿ ಪಕ್ಷೇತರರು ಈ ಬಾರಿ ಬಿಬಿಎಂಪಿಯಲ್ಲಿ ಬಿಜೆಪಿಗೆ ಜೈ ಎನ್ನುವುದು ಗ್ಯಾರಂಟಿ.

ಕಾಂಗ್ರೆಸ್, ಜೆಡಿಎಸ್ ಮತ್ತು ಎಸ್‍ಬಿಎಂನ ಬೆಂಬಲಿಗ ಬಿಬಿಎಂಪಿ ಸದಸ್ಯರು ತಮ್ಮ ನಾಯಕರುಗಳನ್ನು ಹಿಂಬಾಲಿಸುವ ಸಾಧ್ಯತೆ ಇರುವುದರಿಂದ ಸೆಪ್ಟೆಂಬರ್ ಅಂತ್ಯದಲ್ಲಿ ನಡೆಯಲಿರುವ ಮೇಯರ್ ಚುನಾವಣೆಯಲ್ಲಿ 101 ಸಂಖ್ಯಾಬಲ ಹೊಂದಿರುವ ಬಿಜೆಪಿಗೆ ಮೇಯರ್ ಸ್ಥಾನ ಅನಾಯಾಸವಾಗಿ ಒಲಿದುಬರಲಿದೆ.
ರೇಸ್‍ನಲ್ಲಿ ಯಾರ್ಯಾರು?ಕಳೆದ ನಾಲ್ಕು ವರ್ಷಗಳಿಂದ ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪದ್ಮನಾಭರೆಡ್ಡಿ ಅವರ ಹೆಸರು ಮೇಯರ್ ರೇಸ್‍ನಲ್ಲಿ ಮುಂಚೂಣಿಯಲ್ಲಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಆಡಳಿತದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಪ್ರಬಲ ಹೋರಾಟ ನಡೆಸಿರುವ ಪದ್ಮನಾಭರೆಡ್ಡಿ ಅವರನ್ನು ಪಕ್ಷದ ಹೈಕಮಾಂಡ್ ಕೂಡ ಮೇಯರ್ ಆಗಿ ಮಾಡಲು ಆಸಕ್ತಿ ಹೊಂದಿದೆ.

ಇದರ ಜತೆಗೆ ಗೋವಿಂದರಾಜನಗರ ವಾರ್ಡ್‍ನ ಉಮೇಶ್‍ಶೆಟ್ಟಿ, ಪದ್ಮನಾಭನಗರ ವಾರ್ಡ್‍ನ ಎಲ್.ಶ್ರೀನಿವಾಸ, ಮಲ್ಲೇಶ್ವರಂ ಶಾಸಕ ಡಾ.ಅಶ್ವತ್ಥನಾರಾಯಣ್ ಅವರ ಬಲಗೈ ಬಂಟನಾಗಿರುವ ಮಂಜುನಾಥ್‍ರಾಜು ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಎಲ್.ಶ್ರೀನಿವಾಸ್ ಅವರು ಉಪಮೇಯರ್ ಹಾಗೂ ಹಲವು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಪದ್ಮನಾಭರೆಡ್ಡಿ ಅಥವಾ ಎಲ್.ಶ್ರೀನಿವಾಸ್ ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಉತ್ಸುಕರಾಗಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಶಾಸಕ ಡಾ.ಅಶ್ವತ್ಥನಾರಾಯಣ್ ಅವರು ತಮ್ಮ ಕ್ಷೇತ್ರದ ವಾರ್ಡ್‍ನ ಮಂಜುನಾಥ್‍ರಾಜು ಅವರಿಗೆ ಮೇಯರ್ ಪಟ್ಟ ನೀಡುವಂತೆ ಪಟ್ಟು ಹಿಡಿಯುವ ಸಾಧ್ಯತೆ ಇದೆ.
ಮಾಜಿ ಸಚಿವ ವಿ.ಸೋಮಣ್ಣ ಅವರು ಗೋವಿಂದರಾಜನಗರ ವಾರ್ಡ್‍ನ ಬಿಜೆಪಿ ಸದಸ್ಯ ಉಮೇಶ್‍ಶೆಟ್ಟಿ ಅವರ ಹೆಸರನ್ನು ಸೂಚಿಸಿದರೂ ಅಚ್ಚರಿಪಡುವಂತಿಲ್ಲ.
ಒಟ್ಟಾರೆ ಕೊನೆಯ ಅವಧಿಯ ಮೇಯರ್ ಸ್ಥಾನ ಬಿಜೆಪಿಗೆ ಒಲಿದರೆ ಈ ನಾಲ್ವರಲ್ಲಿ ಒಬ್ಬರು ಮೇಯರ್ ಆಗಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ