ನವದೆಹಲಿ: ದೋಸ್ತಿ ಸರ್ಕಾರಕ್ಕೆ ಯಾವುದೇ ಜೀವದಾನ ನೀಡದ ಸುಪ್ರೀಂ ಕೋರ್ಟ್ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಪಕ್ಷೇತರ ಶಾಸಕರಾರದ ನಾಗೇಶ್ ಮತ್ತು ಶಂಕರ್ ಅವರು ವಿಶ್ವಾಸ ಮತಯಾಚನೆ ಇಂದೇ ನಡೆಸಬೇಕೆಂದು ಆದೇಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾ. ರಂಜನ್ ಗೊಗೋಯ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.
ಪಕ್ಷೇತರ ಶಾಸಕರ ಪರವಾಗಿ ಮುಕುಲ್ ರೋಹಟಗಿ ವಾದಿಸಿ, ಸೋಮವಾರ ಮಧ್ಯರಾತ್ರಿಯವರೆಗೂ ಅಧಿವೇಶನ ನಡೆದಿದೆ. ಇಂದು ಸಂಜೆಗೆ ಬಹುಮತ ಸಾಬೀತು ಮಾಡುವುದಾಗಿ ಹೇಳಿದ್ದಾರೆ. ಪ್ರತಿ ದಿನ ಕಲಾಪದಲ್ಲಿ ಹೀಗೆ ನಡೆಯುತ್ತಿರುವುದರಿಂದ ನೀವೇ ಒಂದು ಆದೇಶ ಪ್ರಕಟಿಸಿ ಎಂದು ಪೀಠದಲ್ಲಿ ಮನವಿ ಮಾಡಿದರು.
ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಜುಲೈ 18ಕ್ಕೆ ಕಲಾಪ ಆರಂಭಗೊಂಡಿದ್ದು ಹಲವು ಮಂದಿ ಮಾತನಾಡಬೇಕಿದೆ. ಇತಿಹಾಸವನ್ನು ನೋಡಿದರೆ ಸುದೀರ್ಘ ಚರ್ಚೆ ನಡೆದಿದೆ. ಸದನದಲ್ಲಿ ಅಭಿಪ್ರಾಯ ಮಂಡನೆ ಆಗುತ್ತಿರುವಾಗ ರಾಜ್ಯಪಾಲರು ಸಮಯ ನಿಗದಿ ಮಾಡಿರುವುದು ಸರಿಯಲ್ಲ. ಚರ್ಚೆ ಮಧ್ಯೆ ಮತಕ್ಕೆ ಹಾಕುವುದು ಹೇಗೆ ಎಂದು ಪ್ರಶ್ನಿಸಿದರು.
ಸಿಎಂ ಪರ ವಾದ ವಕೀಲ ರಾಜೀವ್ ಧವನ್, ವಿಶ್ವಾಸ ಮತ ಯಾಚನೆ ಆರಂಭವಾದ ಸಮಯದಲ್ಲಿ ಒತ್ತಡ ಹಾಕಬಾರದು. ಚರ್ಚೆ ನಡೆಯುತ್ತಿದೆ. ಈ ವೇಳೆ ಮತಕ್ಕೆ ಹಾಕುವ ನಿರ್ಧಾರ ಸರಿಯಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು, ಹಾಗಾದರೆ ವಿಶ್ವಾಸ ಮತಯಾಚನೆ ಯಾವಾಗ ನಡೆಯಲಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಸಿಂಘ್ವಿ ಇಂದು ಸಂಜೆಯ ಒಳಗಡೆ ಮತಕ್ಕೆ ಹಾಕುವುದಾಗಿ ಸ್ಪೀಕರ್ ತಿಳಿಸಿದ್ದಾರೆ ಎಂದು ಉತ್ತರಿಸಿದರು. ಸಿಂಘ್ವಿ ಅವರಿಂದ ಈ ಉತ್ತರ ಬರುತ್ತಿದ್ದಂತೆ, ನಾವು ಅದೇ ಆಶಾ ಭಾವದಿಂದ ಕಾದು ನೋಡುತ್ತೇವೆ. ಒಂದು ವೇಳೆ ಮತಕ್ಕೆ ಹಾಕದೇ ಇದ್ದರೆ ನಾಳೆ ವಿಚಾರಣೆ ನಡೆಸೋಣ ಎಂದು ಹೇಳಿ ಇಂದಿನ ವಿಚಾರಣೆಯನ್ನು ಮುಕ್ತಾಯಗೊಳಿಸಿದರು.
ಇಂದು ಯಾವುದೇ ಆದೇಶವನ್ನು ಪ್ರಕಟಿಸದ ಮೂಲಕ ಸುಪ್ರೀಂ ಕೋರ್ಟ್ ಪರೋಕ್ಷವಾಗಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಎರಡನೇ ಬಾರಿ ಎಚ್ಚರಿಕೆ ನೀಡಿದೆ. ರಾಜೀನಾಮೆ ಅಂಗಿಕಾರ ವಿಚಾರದಲ್ಲಿ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನಾವು ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿತ್ತು. ಇಂದು ವಿಶ್ವಾಸ ಮತಯಾಚನೆ ವಿಚಾರದಲ್ಲಿ ಸ್ಪೀಕರ್ ನಡೆಯನ್ನು ಆಶಾಭಾವದಿಂದ ಕಾದು ನೋಡುತ್ತೇವೆ ಎಂದು ಹೇಳುವ ಮೂಲಕ ಎಚ್ಚರಿಕೆ ನೀಡಿ ಮತ್ತಷ್ಟು ಜವಾಬ್ದಾರಿಯನ್ನು ನೀಡಿದೆ.
ಒಂದು ವೇಳೆ ಅರ್ಜಿ ವಿಚಾರಣೆ ಪೂರ್ಣವಾಗಿ ನಡೆಯುವವರೆಗೆ ವಿಶ್ವಾಸ ಮತಯಾಚನೆ ಮಾಡಬೇಡಿ ಎಂದು ಕೋರ್ಟ್ ಆದೇಶ ಪ್ರಕಟಿಸಿದ್ದರೆ ಸದ್ಯ ಕೋಮಾದಲ್ಲಿರುವ ದೋಸ್ತಿ ಸರ್ಕಾರಕ್ಕೆ ಸ್ವಲ್ಪ ಜೀವ ಬರುತಿತ್ತು. ಆದರೆ ಈಗ ಯಾವುದೇ ಆದೇಶ ಪ್ರಕಟಿಸದ ಪರಿಣಾಮ ಇಂದು ಸಂಜೆ ಸ್ಪೀಕರ್ ಸೋಮವಾರ ಸದನದಲ್ಲಿ ತಿಳಿಸಿದಂತೆ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೋ? ಇಲ್ಲವೋ ಎನ್ನುವ ಕುತೂಹಲ ಹೆಚ್ಚಾಗಿದೆ.