ರಾಜಿನಾಮೆ ಗೆ ಮುನ್ನ ಸಿ .ಎಂ…..?

  1. ಬೆಂಗಳೂರು, ಜು.23-ಟ್ವೆಂಟಿ-20 ಕ್ರಿಕೆಟ್ ಪಂದ್ಯದಂತೆ ನಿರ್ಣಾಯಕ ಘಟ್ಟ ತಲುಪಿರುವ ಸಮ್ಮಿಶ್ರ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಸಂಜೆ 6 ಗಂಟೆಗೆ ಬಹುತೇಕ ನಿರ್ಧಾರವಾಗುವ ಹಂತ ತಲುಪಿದೆ.
    ಇಂದು ವಿಶ್ವಾಸ ಮತಯಾಚನೆ ಮುಗಿಸುತ್ತೀರಿ ಎಂಬ ಆಶಾಭಾವನೆ ನಮಗಿದೆ ಎಂದು ಖುದ್ದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್, ಸಂಜೆ 6 ಗಂಟೆಯೊಳಗೆ ವಿಶ್ವಾಸಮತಯಾಚನೆ ಪ್ರಕ್ರಿಯೆಯನ್ನು ಮುಗಿಸುತ್ತಾರಾ ಎಂದು ಪ್ರಶ್ನೆ ಎದುರಾಗಿದೆ.
    ಇದೀಗ ಸರ್ಕಾರ ಉಳಿಸಿಕೊಳ್ಳುವ ಕಾರ್ಯತಂತ್ರಗಳು ಕೈಕೊಟ್ಟಿರುವುದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ವಿಧಾನಸಭೆಯಲ್ಲಿ 4 ಗಂಟೆ ನಂತರ ವಿದಾಯದ ಭಾಷಣ ಮಾಡಿ ವಿಶ್ವಾಸಮತ ಯಾಚನೆ ಮಾಡುತ್ತಾರೋ, ಇಲ್ಲವೇ ರಾಜೀನಾಮೆ ನಿರ್ಧಾರ ಪ್ರಕಟಿಸಿ ರಾಜಭವನಕ್ಕೆ ತೆರಳುತ್ತಾರೋ ಎಂಬ ಕುತೂಹಲ ಕೆರಳಿಸಿದೆ.

ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಕಲಾಪಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸದನದಿಂದ ದೂರ ಉಳಿದಿರುವುದು ನಾನಾ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಬೆಳಗ್ಗೆ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಚರ್ಚಿಸಿ ನಂತರ ನೇರವಾಗಿ ತಾಜ್ ವೆಸ್ಟೆಂಡ್ ಹೊಟೇಲ್ ಸೇರಿದರು.ಮಧ್ಯಾಹ್ನದವರೆಗೂ ಅವರು ಕಲಾಪದಿಂದ ದೂರ ಉಳಿದಿದ್ದರು.

11 ಗಂಟೆಗೆ ಸುಪ್ರೀಂಕೋರ್ಟ್ ಏನು ತೀರ್ಪು ನೀಡುತ್ತದೆ ಎಂದು ಎದುರು ನೋಡುತ್ತಿದ್ದರು. ಯಾವಾಗ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿತೋ ಮುಖ್ಯಮಂತ್ರಿ ಮತ್ತಷ್ಟು ದಾರಿ ಕಾಣದಂತಾದರು. ತಕ್ಷಣವೇ ಸಚಿವರಾದ ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ತಾಜ್‍ವೆಸ್ಟೆಂಡ್ ಹೊಟೇಲ್‍ಗೆ ದೌಡಾಯಿಸಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು.
ಒಂದು ಹಂತದಲ್ಲಿ ಮುಂಬೈನಲ್ಲಿ ಬೀಡುಬಿಟ್ಟಿರುವ ಶಾಸಕರನ್ನು ಮನವೊಲಿಸಲು ಅವರ ಕುಟುಂಬದವರನ್ನು ಸಂಪರ್ಕಿಸುವ ಪ್ರಯತ್ನವನ್ನು ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

ಆದರೆ ನಾವು ಸದಸ್ಯತ್ವದಿಂದ ಅನರ್ಹಗೊಂಡರೂ ಸರಿಯೇ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅತೃಪ್ತರು ಕಡ್ಡಿ ಮುರಿದಂತೆ ಸಂದೇಶ ರವಾನಿಸಿದ್ದರಿಂದ ಕುಮಾರಸ್ವಾಮಿಯವರಿಗೆ ಬಹುತೇಕ ಎಲ್ಲ ಸಂಧಾನದ ಬಾಗಿಲುಗಳು ಬಂದ್ ಆಗಿವೆ.
ಮುಂದೂಡಿಕೆಗೆ ಮನವಿ: ಮೂಲಗಳ ಪ್ರಕಾರ ಸ್ಪೀಕರ್ ರಮೇಶ್‍ಕುಮಾರ್ ಅವರಿಗೆ ವಿಶ್ವಾಸಮತಯಾಚನೆಯನ್ನು ನಾಳೆಗೆ ಮುಂದೂಡುವಂತೆ ದೋಸ್ತಿ ಪಕ್ಷಗಳ ಮುಖಂಡರು ಮನವಿ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿನ್ನೆಯೇ ಇದೇ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ ಸ್ಪೀಕರ್ ಕೋಪಗೊಂಡು ನನ್ನ ಮೇಲೆ ಒತ್ತಡ ಹಾಕಿದರೆ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದರು.ಈಗ ಅವರನ್ನು ಯಾರು ಮನವೊಲಿಸಬೇಕೆಂದು ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ಸಿಎಂ ಬಳಿ ಪ್ರಶ್ನೆ ಮಾಡಿದರು ಎಂದು ನಂಬಲಾರ್ಹ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಕೂಡ ನಾನು ಯಾವುದೇ ಕಾರಣಕ್ಕೂ ಸ್ಪೀಕರ್ ಅವರನ್ನು ಮನವೊಲಿಸುವ ಪ್ರಯತ್ನ ನಡೆಸುವುದಿಲ್ಲ. ನಿನ್ನೆ ಸದನದಲ್ಲಿ ಇಂದು ಸಂಜೆ 6 ಗಂಟೆಯೊಳಗೆ ವಿಶ್ವಾಸಮತಯಾಚನೆ ಪ್ರಕ್ರಿಯೆ ಮುಗಿಸಿಕೊಡುವುದಾಗಿ ಹೇಳಿದ್ದೇನೆ. ಮಾತು ತಪ್ಪಿದರೆ ನನಗೆ ಪ್ರತಿಪಕ್ಷದವರು ವಚನಭ್ರಷ್ಟನೆಂಬ ಪಟ್ಟ ಕಟ್ಟುತ್ತಾರೆ.ನೀವು ಏನಾದರೂ ಮಾಡಿಕೊಳ್ಳಿ ಎಂದು ಕೈ ಚೆಲ್ಲಿದ್ದಾರೆ ಎನ್ನಲಾಗಿದೆ.
ಇದೀಗ ಸ್ಪೀಕರ್ ಅವರು 4 ಗಂಟೆಯವರೆಗೆ ಚರ್ಚೆ ಮುಗಿಸಿ ವಿಶ್ವಾಸ ಮತ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೋ ಇಲ್ಲವೋ ಎಂಬುದನ್ನು ಕಾದುನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ