ಬೆಂಗಳೂರು; ವಿಪ್ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತು ಸೂಕ್ತ ವಿವರಣೆ ಕೇಳಿ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮೈತ್ರಿ ಪಕ್ಷದಿಂದ ಸುಪ್ರೀಂ ಕೋರ್ಟ್ಗೆ ನಾಲ್ಕು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ, ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಮಂಗಳವಾರಕ್ಕೆ ಮುಂದೂಡಿದ್ದು, ಇಂದೂ ಸಹ ಆಡಳಿತ ಪಕ್ಷ ಬಹುಮತ ಸಾಬೀತುಪಡಿಸುವುದು ಅಸಾಧ್ಯ ಎನ್ನಲಾಗುತ್ತಿದೆ.
ಶುಕ್ರವಾರ ಸದನದಲ್ಲಿ ಸಂಜೆಯೊಳಗಾಗಿ ಆಡಳಿತ ಪಕ್ಷ ಬಹುಮತ ಯಾಚನೆ ಮಾಡಬೇಕು ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಆದರೆ, ಈ ವೇಳೆ ಆಶ್ವಾಸನೆ ನೀಡಿದ್ದ ಕುಮಾರಸ್ವಾಮಿ ಸಿದ್ದರಾಮಯ್ಯ ಹಾಗೂ ಮೈತ್ರಿ ಪಕ್ಷದ ನಾಯಕರು ಸೋಮವಾರ ವಿಶ್ವಾಸಮತ ಯಾಚನೆ ಮಾಡುವುದಾಗಿ ಸಭಾಧ್ಯಕ್ಷರಿಗೆ ಮಾತು ನೀಡಿದ್ದರು. ಈ ಆಧಾರದ ಮೇಲೆ ಸದನವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ ಆಗುಹೋಗುಗಳನ್ನು ಗಮನಿಸಿದರೆ ಇಂದೂ ಸಹ ಆಡಳಿತ ಪಕ್ಷ ಬಹುಮತಯಾಚಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.
ಅತೃಪ್ತ ಶಾಸಕರನ್ನು ಸದನಕ್ಕೆ ಹಾಜರಾಗುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಕಳೆದ ಬುಧವಾರವೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ, ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಸಾಕಷ್ಟು ಸಮಯಾವಕಾಶ ಇದ್ದಗ್ಯೂ ವಿಳಂಬ ಮಾಡುವ ಉದ್ದೇಶದಿಂದ ಮೈತ್ರಿ ನಾಯಕರು ಶುಕ್ರವಾರ ಅರ್ಜಿ ಸಲ್ಲಿಸಿದ್ದರು. ಈ ತೀರ್ಮಾನದ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ರಣತಂತ್ರ ಇತ್ತು.
ಶುಕ್ರವಾರ ಸಂಜೆ ಅರ್ಜಿ ಸಲ್ಲಿಸಿದರೆ ಸುಪ್ರೀಂ ಸೋಮವಾರ ವಿಚಾರಣೆ ನಡೆಸುತ್ತದೆ. ಈ ಸಂದರ್ಭದಲ್ಲಿ ಕೋರ್ಟ್ ವಿಪ್ ಮೇಲಿನ ಶಾಸಕಾಂಗ ಪಕ್ಷದ ನಾಯಕನ ಪರಮಾಧಿಕಾರವನ್ನು ಎತ್ತಿಹಿಡಿದರೆ ಇದರಿಂದ ಮೈತ್ರಿ ಸರ್ಕಾರಕ್ಕೆ ಲಾಭವಾಗಲಿದೆ ಎಂಬ ಕಾರಣಕ್ಕೆ ಬಹುಮತ ಯಾಚನೆಗೆ ಸೋಮವಾರ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಮೈತ್ರಿ ನಾಯಕರ ಕೊನೆಯ ಪ್ರಯತ್ನಕ್ಕೂ ಕಲ್ಲಾಕಿರುವ ಸುಪ್ರೀಂ ಈ ಎಲ್ಲಾ ಅರ್ಜಿಯನ್ನು ಮಂಗಳವಾರಕ್ಕೆ ಮುಂದೂಡಿದೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಇಂದು ಬಹುಮತ ಸಾಬೀತುಪಡಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.