ಇಂದು…… ಏನು …..ಆಯಿತು ….?೯ರವರೆಗೆ ಇಲ್ಲಿ ಓದಿ : ವಿಪ ಕ್ಷ ಪಟ್ಟು

ಬೆಂಗಳೂರು, ಜು.೨೨- ಬಹುನೀರಿಕ್ಷಿತ ವಿಶ್ವಾಸಮತಯಾಚನೆ ಇಂದೂ ಕೂಡ ನಡೆಯಲಿಲ್ಲ. ಬೆಳಗ್ಗೆಯಿಂದ ನಡೆದ ನಾಟಕೀಯ ಬೆಳವಣಿಗೆಗಳು ಸಂಜೆಯ ವೇಳೆಗೆ ಪ್ರತಿಭಟನೆ, ಆರೋಪ ಪ್ರತ್ಯಾರೋಪಕ್ಕೆ ತಿರುಗಿ ಸದನ ಹಳಿ ತಪ್ಪಿದಾಗ ಅನ್ಯದಾರಿ ಕಾಣದ ಸಭಾಧ್ಯಕ್ಷರು ಕಲಾಪನ್ನು ಸಂಜೆಯೂ ಮುಂದೂಡಿದರು.
ಬೆಳಗ್ಗೆಯಿಂದಲೂ ವಿಶ್ವಾಸ ಮತ ಯಾಚನೆ ಸಂಬಂಧ ನಾಟಕೀಯ ಬೆಳವಣಿಗೆಗಳು ನಡೆದವು. ಇಂದು ಕಲಾಪ ಆರಂಭವಾಗಿದ್ದೆ ಒಂದು ಘಂಟೆ ತಡವಾಗಿ. ಪ್ರತಿಪಕ್ಷ ಬಿಜೆಪಿ ನಾಯಕರು, ಮೈತ್ರಿ ಪಕ್ಷದ ನಾಯಕರು ಸ್ಪೀಕರ್ ಅವರನ್ನು ಭೇಟಿ ಮಾಡಿದರು. ಬಿಜೆಪಿ ಇಂದೇ ವಿಶ್ವಾಸ ಮತ ಸಾಭೀತಿಗೆ ಪಟ್ಟು ಹಿಡಿದರೆ, ಆಡಳಿತ ಪಕ್ಷ ನಾಯಕರು ಇನ್ನೇರಡು ದಿನಗಳ ಕಾಲ ಸಮಯಾವಕಾಶ ನೀಡುವಂತೆ ಮನವಿ ಮಾಡಿದ್ದರು.
ಕೊನೆಗೆ ೧೧ ಗಂಟೆಗೆ ಆರಂಭವಾಗಬೇಕಿದ್ದ ಕಲಾಪ ೧೨ ಗಂಟೆಗೆ ಶುರುವಾಯ್ತು.
ಅನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ವಿಶ್ವಾಸಮತಯಾಚನೆಯ ಪರವಾಗಿ ಮಾತು ಆರಂಭಿಸಿದರು.
ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ, ಶಾಸಕರಿಗೆ ಕೋಟಿಗಟ್ಟಲೇ ಹಣಕಾಸಿನ ಆಮೀಷವೊಡ್ಡಿದ್ದು, ಸಚಿವ ಸ್ಥಾನ ಸೇರಿದಂತೆ ಹಲವಾರು ಅಧಿಕಾರದ ಆಸೆಗಳನ್ನು ತೋರಿಸಿ ಆಪರೇಷನ್ ಕಮಲ ನಡೆಸಿದೆ. ಏಕಕಾಲಕ್ಕೆ ೧೭ ಮಂದಿ ಶಾಸಕರು ರಾಜೀನಾಮೆ ನೀಡಲು, ಎಲ್ಲರೂ ಮುಂಬೈಗೆ ತೆರಳಲು ಬಿಜೆಪಿ ಕಾರಣ. ಬಿಜೆಪಿಯ ರಾಜ್ಯ ಸಭಾ ಸದಸ್ಯರಿಗೆ ಸೇರಿದ ವಿಶೇಷ ವಿಮಾನಗಳನ್ನು ಶಾಸಕರನ್ನು ಕರೆದೊಯ್ಯಲು ಬಳಸಲಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತ ಪಡಿಸಿದಾಗ ಮಧ್ಯ ಪ್ರವೇಶಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ತಮಗೇನು ಗೋತ್ತಿಲ್ಲ ಎಂದು ನಾಟಕವಾಡುವ ಬದಲು ನಾವೇ ಆಪರೇಷನ್ ಕಮಲ ಮಾಡಿದ್ದೇವೆ ಎಂದು ಒಪ್ಪಿಕೊಂಡು ಬಿಡಲಿ ನಾವು ಯಾವುದೇ ಚರ್ಚೆ ಮಾಡುವುದಿಲ್ಲ ಎಂದು ಸವಾಲು ಹಾಕಿದರು.
ಅನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಜೆಡಿಎಸ್ ಶಾಸಕರಾದ ಎ.ಟಿ.ರಾಮಸ್ವಾಮಿ, ಕಂಪ್ಲಿ ಗಣೇಶ್ ಸೇರಿದಂತೆ ಅನೇಕ ನಾಯಕರು ಮಾತನಾಡಿ ಬಿಜೆಪಿ ಆಪರೇಷನ್ ಕಮಲವನ್ನು ಖಂಡಿಸಿದರು.
ವಿಶ್ವಾಸಮತ ಯಾಚನೆ ವಿರುದ್ಧವಾಗಿ ಬಿಜೆಪಿವತಿಯಿಂದ ಯಾರು ಮಾತನಾಡಲಿಲ್ಲ. ಬದಲಾಗಿ ಆಡಳಿತದಲ್ಲಿರುವ ದೋಸ್ತಿ ಪಕ್ಷದ ಶಾಸಕರು ಟೀಕೆ ಮಾಡಿದಾಗ ಆಗ್ಗಾಗ ಪ್ರತಿರೋಧ ವ್ಯಕ್ತ ಪಡಿಸಿದರು. ಎಂದಿನಂತೆ ಇಂದು ಕೂಡ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಮೈತ್ರಿ ಪಕ್ಷಕ್ಕೆ ಎದುರುಗೋಡೆಯಾಗಿ ನಿಂತರು.
ಸಂಜೆಯ ವೇಳೆಗೆ ಚರ್ಚೆ ನಡೆಯುವ ವೇಳೆ ಆಡಳಿತ ಪಕ್ಷದ ಶಾಸಕರು ಗದ್ದಲ ಎಬ್ಬಿಸಿ ಧರಣಿಗೆ ಮುಂದಾದಾಗ ಸಭಾಧ್ಯಕ್ಷರು ಕಲಾಪವನ್ನು ೧೦ ನಿಮಿಷಗಳ ಕಾಲ ಮುಂದೂಡಿದರು.
ಇದಕ್ಕೂ ಮೊದಲು ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರು ಪ್ರತ್ಯೇಕವಾಗಿ ಸ್ಪೀಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಮಧ್ಯೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕೂಡಾ ಸ್ಪೀಕರ್ ಅವರನ್ನು ಭೇಟಿ ಮಾಡಿದರು.
ಶತಾಯಗತಾಯ ಇದೇ ದಿನ ವಿಶ್ವಾಸಮತಂ ಯಾಚನೆ ಕೈಗೊತ್ತಿಕೊಳ್ಳುತ್ತೇನೆ ಎಂದು ಸ್ಪೀಕರ್ ಪಟ್ಟ ಹಿಡಿದಿದ್ದರು. ಅವರನ್ನು ಮನವೋಲಿಸಲು ದೋಸ್ತಿ ಪಕ್ಷಗಳ ಮುಖಂಡರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವರಾದ ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ, ಕೆ.ಜೆ.ಜಾರ್ಜ್, ಸಾ.ರಾ.ಮಹೇಶ್ ಅವರು ಸ್ಪೀಕರ್ ಅವರನ್ನು ಭೇಟಿ ಮಾಡಿ ಮನವೋಲಿಸುವ ಪ್ರಯತ್ನ ನಡೆಸಿದರು.
ನಾಳೆ ಸುಪ್ರೀಂಕೋರ್ಟ್‌ನ ವಿಚಾರಣೆಯನ್ನು ನೋಡಿಕೊಂಡು ವಿಶ್ವಾಸಮತಯಾಚನೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಆದರೆ ಶುಕ್ರವಾರ ಸದನಕ್ಕೆ ನೀಡಿದ ಭರವಸೆಯಂತೆ ಇಂದು ವಿಶ್ವಾಸಮತಯಾಚನೆ ಮುಗಿಯಲೇ ಬೇಕು ಎಂದು ಪಟ್ಟು ಹಿಡಿದರು.
ಕೊನೆಗೆ ರಾತ್ರಿ ೭.೧೫ಕ್ಕೆ ಕಲಾಪ ಆರಂಭವಾದಾಗ ಕಾಂಗ್ರೆಸ್ ಜೆಡಿಎಸ್ ಶಾಸಕರು ತಮ್ಮ ಸ್ಥಳದಲ್ಲೇ ಎದ್ದು ನಿಂತು ಗಲಾಟೆ ನಡೆಸಿದ್ದಲ್ಲದೆ, ಸಂವಿಧಾನ ಉಳಿಸಿ ಎಂದು ಘೋಷಣೆ ಕೂಗಿದರು. ನಾನಿಲ್ಲಿ ಕುಳಿತಿರುವುದೇ ಸಂವಿಧಾನ ಉಳಿಸಲು ಎಂದು ಸ್ಪೀಕರ್ ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರು ಮಾತನಾಡಲು ಎದ್ದು ನಿಂತರಾದರೂ ಆಡಳಿತ ಪಕ್ಷದ ಶಾಸಕರು ಗದ್ದಲ ಎಬ್ಬಿಸಿ ಅವಕಾಶ ನೀಡಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದರು ಶಾಸಕರು ಸುಮ್ಮನಾಗಲಿಲ್ಲ.
ನ್ಯಾಯಬೇಕು ಎಂದು ಘೋಷಣೆ ಕೂಗಿದರು. ನಿಮಗೆ ನ್ಯಾಯ ಕೊಡುವವರು ಯಾರುಯ ಎಂದು ಸ್ಪೀಕರ್ ಪ್ರಶ್ನಿಸಿದರು. ನೀವು ಎಷ್ಟು ಗಲಾಟೆ ಮಾಡಿದರು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ರಾತ್ರಿಯೆಲ್ಲಾ ಹಿಗೇ ಕುಳಿತಿರುತ್ತೇನೆ. ನೀವು ಮಾತನಾಡುವ ಯಾವ ಮಾತುಗಳು ಕಟತಕ್ಕೆ ಹೋಗುವುದಿಲ್ಲ ಎಂದು ಸ್ಪೀಕರ್ ಹೇಳಿದರು.
ಕೆಪಿಸಿಸ ಅಧ್ಯಕ್ಷ ದಿನೇಶ್ ಗುಂಡುರಾವ್ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ.
ಸಚಿವ ಸಾ.ರಾ.ಮಹೇಶ್ ಮಾತನಾಡಿ, ಇಬ್ಬರು ಪಕ್ಷೇತರ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲಿನ ತೀರ್ಪು ಏನು ಬರಲಿದೆ ಎಂದು ನೋಡಿಕೊಂಡು ಇಲ್ಲಿನ ವಿಶ್ವಾಸಮತ ಯಾಚನೆ ನಡೆಯಲಿ ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಎದ್ದು ನಿಂತು ನಾನು ಒಂದೆರಡು ಮಾತನಾಡಬೇಕು. ದಯವಿಟ್ಟು ನೀವು ನಿಮ್ಮ ಸ್ಥಾನಗಳಿಗೆ ಹೋಗಿ ಕುಳಿತುಕೊಳ್ಳಿ ಎಂದು ಮನವಿ ಮಾಡಿದರು ಶಾಸಕರು ಕಿವಿಗೊಡಲಿಲ್ಲ.
ಕೊನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎದ್ದು ನಿಂತು ಶಾಸಕರನ್ನು ಸಮಾಧಾನ ಪಡಿಸಿ ಕೂರಿಸಿದರು.
ನಂತರ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಸಭಾನಾಯಕರು, ವಿಪಕ್ಷ ನಾಯಕರು ಮಾತನಾಡಲು ಎದ್ದು ನಿಂತಾಗ ಶಾಸಕರು ಗೌರವ ಕೊಡಬೇಕು. ವಿಪಕ್ಷ ನಾಯಕರು ಮಾತನಾಡಲು ಅವಕಾಶ ನೀಡಲಾಗದಿದ್ದರೆ ನನಗೆ ಅವಮಾನ ಮಾಡಿದಂತೆ, ನಾನೆಂತ ಅಸಹಾಯಕ ಅಧ್ಯಕ್ಷ ಎಂದು ಬೇಸರವಾಗುತ್ತದೆ. ಆ ಪರಿಸ್ಥಿತಿಯಲ್ಲಿ ನಾನು ಬೇರೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನನಗೂ ಭಾವನೆಗಳಿವೆ. ಎಷ್ಟು ಎಂದು ತಾಳ್ಮೆವಹಿಸುವುದು ಎಂದು ಭಾವೋದ್ವೇಗಕ್ಕೆ ಒಳಗಾಗಿ ಪ್ರಶ್ನಿಸಿದರು.
ನಂತರ ವಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು. ಯಡಿಯೂರಪ್ಪ ಮಾತನಾಡಿ ಸಿದ್ದರಾಮಯ್ಯ, ಕುಮಾರಸ್ವಾಮಿ ಶುಕ್ರವಾರ ಮಾತನಾಡಿ ಸೋಮವಾರ ವಿಶ್ವಾಸ ಮತ ಮುಗಿಸುತ್ತೇವೆ ಎಂದು ಹೇಳಿದ್ದರು. ನೀವು ಕೂಡ ವಿಶ್ವಾಸಮತ ಮುಗಿಸದೆ ನಾನುಎದ್ದು ಹೋಗಲ್ಲ ಎಂದು ಭರವಸೆ ಕೊಟ್ಟಿದ್ದೀರಿ ನಿಮ್ಮ ಮೇಲೆ ನಮಗೆ ವಿಶ್ವಾಸ ಇದೆ. ನಾವ್ಯಾರು ಮಾತನಾಡಲ್ಲ, ರಾತ್ರಿ ಹನ್ನೆರಡು ಗಂಟೆಯಾಗಲಿ ನಾವು ಕುಳಿತುಕೊಳ್ಳುತ್ತೇವೆ ಎಂದು ಹೇಳಿದರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಎಚ್.ಕೆ.ಪಾಟೀಲ್ ಮಾತನಾಡಿದರು. ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕುಮಾರಸ್ವಾಮಿ ಸ್ವಯಂ ವಿಶ್ವಾಸ ಮತಯಾಚನೆ ಪ್ರಸ್ತಾಪ ಮಂಡಿಸಿದ್ದಾರೆ. ೧೩ ಮಂದಿ ಶಾಸಕರು ಸದನಕ್ಕೆ ಬರುತ್ತಾರೋ ಇಲ್ವೋ ಗೋತ್ತಿಲ್ಲ. ಮತಹಾಕಿಸುವುದು, ವಿಶ್ವಾಸಮತ ಯಾಚನೆ ಮುಖ್ಯಮಂತ್ರಿಯವರ ಕೆಲಸ. ಸಭಾಧ್ಯಕ್ಷರು ಹೇಳಿದ ಮೇಲೂ ಪದೇ ಪದೇ ಅದೇ ಚರ್ಚೆ ಮಾಡಿದರೆ ಸದನಕ್ಕೆ ಗೌರವ ಬರುವುದಿಲ್ಲ. ಸಿಎಂ ಮೊದಲು ವಿಶ್ವಾಸಮತಯಾಚನೆ ಮಾಡಲಿ, ಮತ ವಿಭಜನೆಗೆ ಹಾಕಿ ಅವರಿಗೆ ಶಕ್ತಿ ಇದ್ದರೆ ಅವರು ಗೆಲ್ಲಲಿ, ನಮಗೆ ಶಕ್ತಿ ಇದ್ದರೆ ನಾವು ಗೆಲ್ಲುತ್ತೇವೆ. ನಿಮ್ಮ ಬಗ್ಗೆ ಇರುವ ಗೌರವದ ಬಗ್ಗೆ ನಮಗೆ ನಂಬಿಕೆ ಇದೆ ಎಂದು ಹೇಳಿದರು.
ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಅನಗತ್ಯ ವಿಳಂಬ ಮಾಡುತ್ತಿರುವುದು ಬಿಜೆಪಿ. ಮೊದಲ ದಿನ ಸಭೆ ಕರೆದಾಗ ಸಭೆಗೆ ಬರದೆ ಹೋಗಿದ್ದು ಅವರು. ಸುಪ್ರೀಂಕೋರ್ಟ್‌ಗೆ ಹೋಗಿದ್ದು ನಾವಲ್ಲ ಅವರು ಎಂದು ಹೇಳಿದರು. ರೇವಣ್ಣನವರ ಮಾತುಗಳಿಗೆ ಬಿಜೆಪಿ ಶಾಸಕರು ಅಡ್ಡಿ ಪಡಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾತನಾಡಿ, ೧೫ ಜನ ಶಾಸಕರು ಸದನಕ್ಕೆ ಬಂದಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ನಂತರ ನೀವು ಕೊಟ್ಟ ರೂಲಿಂಗ್‌ನಿಂದ ರಾಜೀನಾಮೆ ನೀಡಿದ ಶಾಸಕರಿಗೆ ಜ್ಞಾನೋದಯವಾಗಿ ಸದನಕ್ಕೆ ಬರಬಹುದು ಎಂಬ ನಿರೀಕ್ಷೆಯಿದೆ. ಹಿಂದೆ ಇದೇ ರೀತಿ ಪ್ರಕರಣ ನಡೆದು ಶಾಸಕರು ವಾಪಾಸ್ ಬಂದ ಉದಾಹರಣೆ ಇದೆ. ಬಿಜೆಪಿಯವರು ಸಭಾಧ್ಯಕ್ಷರ ಮೇಲೆ ನಂಬಿಕೆ ಇದೆ ಎನ್ನುತ್ತಾರೆ, ಮತ್ತೊಂದೆಡೆ ಕೋರ್ಟ್ ಮೆಟ್ಟಿಲೇರುತ್ತಾರೆ. ಪಕ್ಷೇತರ ಶಾಸಕರು ಸಂಜೆ ೫ ಗಂಟೆಗೆ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಅಲ್ಲಿನ ತೀರ್ಪು ನಿರೀಕ್ಷೆಯಲ್ಲಿದ್ದೇವೆ. ಕೆಲವು ಬಹಳಷ್ಟು ಆತುರದಲ್ಲಿದ್ದಾರೆ. ಸಂಜೆ ನಾನು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಕೊಟ್ಟಿದ್ದೇನೆ ಎಂದು ಮಾಧ್ಯಮಗಳು ನಕಲಿ ಪತ್ರ ಆಧರಿಸಿ ಸುದ್ದಿ ಪ್ರಸಾರ ಮಾಡಿ ಅಪಪ್ರಚಾರ ಮಾಡಿದ್ದಾರೆ. ರಾಜಕಾರಣ ಈ ಮಟ್ಟಕ್ಕೆ ಹೋಗಿದೆ. ಮುಖ್ಯಮಂತ್ರಿಯ ಸಹಿಯನ್ನೇ ನಕಲಿ ಮಾಡಿದ್ದಾರೆ. ಇದಕ್ಕೇಲ್ಲಾ ಕಡಿವಾಣ ಹಾಕಬೇಕಿದೆ. ಎಲ್ಲಿ ಹೋಗುತ್ತಾರೆ ಎಂದು ಹೇಳಿದರು.
ನಾವು ವಿಶ್ವಾಸ ಮತಕ್ಕೆ ಹೆದರುತ್ತಿಲ್ಲ. ಹಲವು ಶಾಸಕರು ಚರ್ಚೆ ಮಾಡಬೇಕಿದೆ ಅದಕ್ಕೆ ಸಮಯವಾಕಾಶ ನೀಡಿ ಎಂದು ಮನವಿ ಮಾಡಿದರು.
ಜೆ.ಸಿ,ಮಾಧುಸ್ವಾಮಿ, ಇವತ್ತು ಮುಗಿಸಿ ಎಲ್ಲರಿಗೂ ಗೌರವ ಬರುತ್ತೆ ಎಂದಾಗ, ಇದಕ್ಕೆ ಸಿಟ್ಟಾದ ಮುಖ್ಯಮಂತ್ರಿಯವರು ಗೌರವ ಎಂದರೆ ಏನು ? ಅಗೌರವ ಆಗುವಂತದ್ದು ಏನಾಗಿದೆ ಎಂದು ಪ್ರಶ್ನಿಸಿದರಲ್ಲದೆ. ಬೆಳಗ್ಗೆಯಿಂದ ಆಪರೇಷನ್ ಕಮಲದ ಬಗ್ಗೆ ಸಚಿವ ಕೃಷ್ಣಬೈರೇಗೌಡ ಹಲವು ವಿಷಯ ಪ್ರಸ್ತಾಪಿಸಿದ್ದಾರೆ. ಅದರಲ್ಲಿ ನಿಮ್ಮ ಗೌರವ ಏನು ಎಂದು ಗೋತ್ತಾಗುತ್ತದೆ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.
ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ರಾತ್ರಿ ೧೨ ಗಂಟೆಯಾಗಲಿ ಚರ್ಚೆ ಮುಂದುವರೆಸಿ, ಇವತ್ತೆ ಮುಗಿಯಲಿ ಎಂದು ಒತ್ತಾಯಿಸಿದರು.
ಬಂಡೆಪ್ಪ ಕಾಶೆಂಪುರ್ ಮಾತನಾಡಿ, ಅವಿಶ್ವಾಸ ನಿರ್ಣಯ ಚರ್ಚೆಯಾಗುವವರೆಗೂ ನಾವು ಸದನಕ್ಕೆ ಬರಲ್ಲ ಎಂದು ಬಿಜೆಪಿಯವರು ಹೇಳಿದ್ದರು. ನಾವು ಅದನ್ನು ಗೌರವಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಸಂಜೆಯ ನಂತರದ ಅಧಿವೇಶನದ ಉದ್ದಕ್ಕೂ ಆಡಳಿತ ಪಕ್ಷದ ಶಾಸಕರು ಎದ್ದು ನಿಂತು ಗಲಾಟೆ ಮಾಡುತ್ತಲೆ ಇದ್ದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಮಾತನಾಡಿ, ಬಹುಮತ ಇದ್ದರೆ ಬಿಜೆಪಿಗೆ ಭಯ ಯಾಕೆ. ಚರ್ಚೆಗೆ ಅವಕಾಶ ಬೇಕಿದೆ. ನೀವು ಇಂದು ನೀಡಿದ ರೂಲಿಂಗ್ ಐತಿಹಾಸಿಕವಾದದ್ದು, ಅದನ್ನು ಆದರಿಸಿ ನಾಳೆ ಏನು ಬೇಕಾದರೂ ನಡೆಯಬಹುದು. ಹಾಗಾಗಿ ಇವತ್ತು ವಿಶ್ವಾಸಮತ ಬೇಡ. ನಾಳೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಸಚಿವ ಜಾರ್ಜ್ ಮಾತನಾಡಿ, ಬೇಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ಕಾಣುವುದಿಲ್ಲವೇ. ಬಿಜೆಪಿಯ ಕುದುರೆ ವ್ಯಾಪಾರ ರಾಜ್ಯಪಾಲರ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ