ಬೆಂಗಳೂರು, ಜು.22-ರಾಜೀನಾಮೆ ನೀಡಿರುವ ಶಾಸಕರ ವಿಚಾರದಲ್ಲಿ ತೀರ್ಮಾನ ಮಾಡಿದ ನಂತರವೇ ವಿಶ್ವಾಸಮತಯಾಚನಾ ನಿರ್ಣಯವನ್ನು ಮತಕ್ಕೆ ಹಾಕಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿಂದು ಸ್ಪೀಕರ್‍ಗೆ ಮನವಿ ಮಾಡಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 15 ಶಾಸಕರು ರಾಜೀನಾಮೆ ನೀಡಿದ್ದಾರೆ.ಅವರಿಗೆ ವಿಪ್ ಕೂಡ ನೀಡಲಾಗಿದೆ.ಈಗಾಗಲೇ ಅವರು ವಿಪ್ ಉಲ್ಲಂಘಿಸಿದ್ದು, ಅದರ ಬಗ್ಗೆ ತೀರ್ಮಾನ ಕೈಗೊಳ್ಳಬೇಕು.ಶಾಸಕರ ರಾಜೀನಾಮೆ ವಿಚಾರದಲ್ಲಿ ತೀರ್ಮಾನ ಕೈಗೊಳ್ಳದೆ ವಿಶ್ವಾಸಮತದ ನಿರ್ಣಯವನ್ನು ಮತಕ್ಕೆ ಹಾಕಿದರೆ ಅದು ಸಿಂಧುವಾಗುವುದಿಲ್ಲ. ಸಭಾಧ್ಯಕ್ಷರು ರಾಜೀನಾಮೆ ನೀಡಿದ ಶಾಸಕರ ವಿಚಾರದಲ್ಲಿ ಇತ್ಯರ್ಥವಾದ ನಂತರ ಮತಕ್ಕೆ ಹಾಕಿದರೆ ಸಿಂಧುತ್ವ ಬರುತ್ತದೆ.ಇಲ್ಲದಿದ್ದರೆ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ತೀರ್ಮಾನ ಮಾಡಿದಂತೆ ಆಗುತ್ತದೆ ಎಂದರು.
ಸುಪ್ರೀಂಕೋರ್ಟ್ ರಾಜೀನಾಮೆ ನೀಡಿರುವ ವಿಚಾರದಲ್ಲಿ ಮಧ್ಯಂತರ ತೀರ್ಪು ನೀಡಿ ರಾಜೀನಾಮೆ ನೀಡಿರುವ ಶಾಸಕರು ಅಧಿವೇಶನದಲ್ಲಿ ಭಾಗವಹಿಸುವುದು ಅಥವಾ ಭಾಗವಹಿಸದೇ ಇರುವುದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದಿದೆ. ಹೀಗಾಗಿ ಅವರು ನಮಗೆ ಸುಪ್ರೀಂಕೋರ್ಟ್ ತೀರ್ಪಿನ ರಕ್ಷಣೆ ಇದೆ ಎಂದು ಭಾವಿಸಿ ಶಾಸಕರು ಸದನಕ್ಕೆ ಹಾಜರಾಗುವುದಿಲ್ಲ. ರಾಜೀನಾಮೆ ನೀಡಿರುವ 15 ಮಂದಿ ಶಾಸಕರ ವಿಚಾರದಲ್ಲಿ ತ್ರಿಶಂಕು ಸ್ಥಿತಿ ಇದೆ.ಸಂವಿಧಾನದಲ್ಲಿ ತ್ರಿಶಂಕು ಸ್ಥಿತಿಗೆ ಅವಕಾಶವಿಲ್ಲ.
ಅವರು ಸದನದ ಸದಸ್ಯರೇ ಅಥವಾ ಸದಸ್ಯರಲ್ಲವೇ ಎಂಬುದರ ಬಗ್ಗೆ ತೀರ್ಮಾನವಾಗಬೇಕು.ರಾಜೀನಾಮೆ ಅಂಗೀಕರಿಸದೆ ಸದನದ ಸದಸ್ಯತ್ವ ಇರುತ್ತದೆ. ರಾಜೀನಾಮೆಯನ್ನು ಒಪ್ಪುವ ಅಥವಾ ತಿರಸ್ಕರಿಸುವ ವಿಪ್ ಉಲ್ಲಂಘನೆ ಬಗ್ಗೆ ಸದಸ್ಯತ್ವದಿಂದ ಅನರ್ಹಗೊಳಿಸವ ವಿಚಾರ ಸಭಾಧ್ಯಕ್ಷರ ಮುಂದೆ ಎಂದರು.
ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಅಥವಾ ಸರ್ಕಾರ ಉಳಿಸಿಕೊಳ್ಳಲು ಈ ವಿಷಯ ಪ್ರಸ್ತಾಪಿಸಿಲ್ಲ. ಧಮನಕಾರಿ ನೀತಿ ವಿರುದ್ಧ ಹೋರಾಟ ಮಾಡಬೇಕಾಗಿದೆ.ರಾಜಕೀಯ ಸ್ವತಂತ್ರ್ಯದ ಉಳಿವಿಗೆ,ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡಬೇಕಾಗಿದೆ. ಕರ್ನಾಟಕದಲ್ಲಿ ಪ್ರತಿಪಕ್ಷದವರಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದ್ದು, ಪ್ರಜಾಪ್ರಭುತ್ವದ ರಕ್ತ ಅವರ ಕೈಗೆ ಅಂಟಿದೆ ಎಂದರು.
ಅಘೋಷಿತ ತುರ್ತು ಪರಿಸ್ಥಿತಿ:
ದೇಶದಲ್ಲಿ ಕಾಂಗ್ರೆಸ್ ಅಲ್ಲಾ ಎಲ್ಲಾ ಪಕ್ಷವನ್ನು ಮುಗಿಸುವ ಪ್ರಯತ್ನ ನಡೆಯುತ್ತಿದ್ದು, ಇದೇ ರೀತಿ ಮುಂದುವರೆದರೆ ರಾಷ್ಟ್ರದಲ್ಲಿ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ.ಯಾರು ಏನು ಮಾತನಾಡಬೇಕು ಎಂಬುದು ಎಲ್ಲೋ ನಿರ್ಧಾರವಾಗುತ್ತದೆ. ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯದಲ್ಲೂ ಆಪರೇಷನ್ ಕಮಲ ನಡೆಯುತ್ತಿದೆ.ದೇಶದಲ್ಲಿ ಮುಕ್ತ ವಾತಾವರಣ ಇಲ್ಲ.
ರಷ್ಯಾದಲ್ಲೂ ಚುನಾವಣೆ ನಡೆದರೂ ಅಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿಲ್ಲ. ನಮ್ಮಲ್ಲೂ ಅದೇ ರೀತಿ ಆಗಬಹುದೆಂಬ ಆತಂಕ ಕಾಡುತ್ತಿದೆ ಎಂದರು.
ಯಾವ ಘೋಷಣೆ ಕೂಗಬೇಕು, ಕೂಗಬಾರದು, ಯಾವ ಆಹಾರ ತಿನ್ನಬೇಕು, ತಿನ್ನಬಾರದು ಎಂಬುದರ ಅಘೋಷಿತ ತುರ್ತು ಪರಿಸ್ಥಿಸಿ ನಿರ್ಮಾಣವಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.