ಬಡವರ ದುಡ್ಡು ತಿನ್ನವರಿಗೆ ಸರ್ಕಾರ ರಕ್ಷಣೆ ಕೊಡುವುದಿಲ್ಲ-ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜು.22-ಬಡವರ ದುಡ್ಡು ತಿನ್ನುವವರಿಗೆ ಮೈತ್ರಿ ಸರ್ಕಾರ ರಕ್ಷಣೆ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಗೆ ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಮಾಡಿದ ಟೀಕೆಗೆ ಮಧ್ಯಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಈಗಾಗಲೇ ಬಹುಕೋಟಿ ಹಣ ವಂಚನೆ ಆರೋಪದ ಮೇಲೆ ಐಎಂಎ ವ್ಯವಸ್ಥಾಪಕರನ್ನು ವಿಶೇಷ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಜಾರಿ ನಿರ್ದೇಶನಾಲಯ(ಇಡಿ) ತನಿಖೆ ನಡೆಸಲಿ, ಸತ್ಯಾಂಶ ಹೊರಬರಲಿ ಎಂದರು.
ಬಿರಿಯಾನಿ ಕಥೆ ನಡೆದಿಲ್ಲ:

ತಾವು ಎರಡನೇ ಬಾರಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಂತರ ನಾನ್‍ವೆಜ್ ತಿನ್ನುವುದನ್ನು ಬಿಟ್ಟಿರುವುದಾಗಿ ತಿಳಿಸಿದರು. ರಂಜಾನ್ ಹಬ್ಬದ ಸಂದರ್ಭದಲ್ಲಿ ಇಫ್ತಿಯಾರ್‍ಗೆ ತಾವು ಶಾಸಕರೊಬ್ಬರ ಬಲವಂತಕ್ಕೆ ಆ ಸಂಸ್ಥೆಗೆ ಭೇಟಿ ನೀಡಿ ಕರ್ಜೂರ ತಿಂದಿದ್ದಾಗಿ ಹೇಳಿದರು, ಆದರೆ ಬಿರಿಯಾನಿ ತಿಂದಿಲ್ಲ. ಐಎಂಎ ಸಂಸ್ಥೆ ನಮ್ಮ ಅವಧಿಯಲ್ಲಿ ಪ್ರಾರಂಭವಾಗಿಲ್ಲ, 10-12 ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ. 250 ಕೋಟಿ ರೂ.ತೆರಿಗೆ ಪಾವತಿಸಿದ್ದಕ್ಕೆ ಕೇಂದ್ರ ಸರ್ಕಾರ ಪ್ರಶಸ್ತಿನೀಡಿ ಗೌರವಿಸಿದೆ ಎಂದು ಪ್ರಧಾನಿಯವರ ಫೆÇೀಟೋವನ್ನು ಕೂಡ ಕಚೇರಿಯಲ್ಲಿ ಹಾಕಿಕೊಂಡಿರುವುದನ್ನು ಗಮನಿಸಿದ್ದಾಗಿ ಮುಖ್ಯಮಂತ್ರಿ ಹೇಳಿದರು.

ಐಎಂಎ ಪ್ರಕರಣದ ಬಗ್ಗೆ ಎಸ್‍ಐಟಿ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಕ್ತ ತನಿಖೆಗೆ ನಿರ್ದೇಶನ ನೀಡಲಾಗಿದೆ. ಆ ಐಎಂಎ ವ್ಯವಸ್ಥಾಪಕರ ಪರಿಚಯವಿಲ್ಲ. ಸಚಿವ ಕೃಷ್ಣಭೆರೇಗೌಡರು ಪ್ರಸ್ತಾಪಿಸಿರುವ ಶಾಸಕರೊಬ್ಬರು ರಂಜಾನ್ ಸಂದರ್ಭದಲ್ಲಿ ಇಫ್ತಿಯಾರ್‍ಗೆ ಬರಬೇಕೆಂದು ಬಲವಂತವಾಗಿ ಕರೆದುಕೊಂಡು ಹೋಗಿದ್ದರು. ಅದೇ ತಮ್ಮ ಮೊದಲ ಭೇಟಿ ಎಂದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ರಮೇಶ್‍ಕುಮಾರ್ ಅವರು, ಪೂರ್ಣವಾಗಿ ನಾನ್‍ವೆಜ್ ಬಿಡಬೇಡಿ, ಫಿಶ್, ನಾಟಿ ಕೋಳಿ ತೆಗೆದುಕೊಳ್ಳಿ ಎಂದು ಸಲಹೆ ಮಾಡಿದರು. ಈ ವಿಚಾರ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರಿಗೆ ಖುಷಿಯಾಗಿರಬೇಕು ಎಂದಾಗ, ಈಶ್ವರಪ್ಪ ಪ್ರತಿಕ್ರಿಯಿಸಿ ಸತ್ಯ ಹೇಳುತ್ತಿದ್ದೀರಿ ಅದಕ್ಕೆ ಖುಷಿಯಾಗುತ್ತಿದೆ ಎಂದರು.

ಅದಕ್ಕೆ ಸಭಾಧ್ಯಕ್ಷರು ತಾವು ಯಾವಾಗಲೂ ಸತ್ಯ ಹೇಳುತ್ತಿರುವುದಾಗಿ ಪ್ರತಿಕ್ರಿಯಿಸಿದರು.
ಇಂಟೆಲಿಜೆನ್ಸ್ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಜವಾಬ್ದಾರಿ ಇದ್ದವರಿಗೆ ಬುದ್ಧಿ ಬುದ್ಧಿ ಎಂದು ಕರೆಯುತ್ತಾರೆ.
ನೇಣಿಗೆ ಹಾಕಿ: ಸುಮಾರು 40 ಸಾವಿರ ಕುಟುಂಬದ ಹಣ ವಂಚನೆ ಆರೋಪದಲ್ಲಿ ತಪ್ಪಿತಸ್ಥರನ್ನು ನೇಣಿಗೆ ಹಾಕಲಿ.ಅವರ ಪಾಪದ ಹಣದಲ್ಲಿ ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಹಾಗೆ ಬಳಸಿಕೊಂಡಿದ್ದರೆ ಅದಕ್ಕಿಂತ ಪಾಪದ ಕಾರ್ಯ ಮತ್ತೊಂದಿಲ್ಲ. ಆಡಳಿತ ನಡೆಸುವವರು ಗುಪ್ತಚರ ಇಲಾಖೆ ಹೊಂದಿದವರು ಇವರೇ. ಆದರೆ ಆರೋಪಿತ ವ್ಯಕ್ತಿಯೊಂದಿಗೆ ಬಿರಿಯಾನಿ ತಿಂದವರು ಯಾರು ಎಂಬುದು ದೇಶಕ್ಕೇ ಗೊತ್ತಾಗಿದೆ ಎಂದು ಛೇಡಿಸಿದರು.
ಆರೋಪಿಗೆ ಕ್ಲೀನ್ ಚಿಟ್ ನೀಡಿದ ವ್ಯಕ್ತಿ ಈಗ ಜೈಲಿನಲ್ಲಿದ್ದಾರೆ.ವಂಚನೆಗೊಳಗಾದ ಜನರ ಪರವಾಗಿದ್ದವರು, ಆರೋಪಿಯನ್ನು ಹಾಡಿ ಹೊಗಳಿದ್ದಾರೆ.ಸರ್ಕಾರ ನಿಮ್ಮೊಂದಿಗೆ ಇದೆ ಎಂದು ಹೇಳಿದ್ದಾರೆ ಎಂದು ಸದನದ ಗಮನಕ್ಕೆ ತಂದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸಚಿವ ಕೃಷ್ಣಭೆರೇಗೌಡ ಅವರು, ಅಲ್ಪಸಂಖ್ಯಾತರ ಸಮುದಾಯದ ಬಡವರು ತಮ್ಮ ಮನೆ, ನಿವೇಶನವನ್ನು ಲೀಸ್‍ಗೆ ನೀಡಿ ಬಾಡಿಗೆ ಮನೆಯಲ್ಲಿದ್ದು, ಸಂಸ್ಥೆಯೊಂದರಲ್ಲಿ ಬಂಡವಾಳ ಹಾಕುತ್ತಾರೆ. ಹೆಚ್ಚಿನ ಆದಾಯದ ನಿರೀಕ್ಷೆಯಿಂದ ಅದೆಲ್ಲವೂ ಬಡವರ ಹಣ. ಆ ಸಂಸ್ಥೆ ಮುಖ್ಯಸ್ಥರು ನೇರವಾಗಿ ಶಾಸಕರೊಂದಿಗೆ 450 ಕೋಟಿ ರೂ. ವ್ಯವಹಾರ ಆಗಿದೆ ಎಂದು ಆರೋಪಿಸಿದ್ದಾರೆ.ಈ ವಿಚಾರದಲ್ಲಿ ತಾವು ಗೌಪ್ಯತೆ ಉಲ್ಲಂಘನೆ ಮಾಡುತ್ತಿಲ್ಲ. ಎಲ್ಲ ಮಾಹಿತಿಯನ್ನು ಸಾರ್ವಜನಿಕ ವಲಯದಿಂದ ಸಂಗ್ರಹಿಸಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ, ಈಗಾಗಲೇ ಎಸ್‍ಐಟಿ ರಚನೆಯಾಗಿದೆ. ಆದರೂ ಇಲ್ಲಿ ಚರ್ಚೆ ಬೇಕೇ ಎಂದಾಗ, ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಸಭಾನಾಯಕರು, ವಿರೋಧ ಪಕ್ಷದ ನಾಯಕರು, ನಾನೂ ಸೇರಿದಂತೆ 225 ಸದಸ್ಯರ ವಿಚಾರದಲ್ಲಿ ಇಲ್ಲಿ ಬಿಟ್ಟರೆ ಬೇರೆಲ್ಲಿ ಚರ್ಚೆಯಾಗಬೇಕು. ವಿಷಯ ಪ್ರಸ್ತಾಪಿಸುತ್ತಿರುವ ಸಚಿವರು ಸಾಕ್ಷ್ಯಾಧಾರ ಒದಗಿಸದಿದ್ದರೆ ಎಲ್ಲವನ್ನೂ ಕಡತದಿಂದ ತೆಗೆದುಹಾಕಲಾಗುವುದು.ತನಿಖಾ ವಿಚಾರದ ಬಗ್ಗೆ ಮಾತನಾಡಲು ಅವಕಾಶವಿಲ್ಲ. ಒಬ್ಬ ಶಾಸಕರ ಕುರಿತು ಮಾಡಿರುವ ಆರೋಪದ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಎಂದು ಅವಕಾಶ ಮಾಡಿಕೊಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ