ವಿಪ್ ಅಸ್ತ್ರದ ಮೂಲಕ ಅತೃಪ್ತರನ್ನು ಕಾನೂನಿನ ಕುಣಿಕೆಗೆ ಸಿಲುಕಿಸುವ ಯತ್ನ

ಬೆಂಗಳೂರು,ಜು.22- ವಿಪ್ ಅಸ್ತ್ರದ ಮೂಲಕ ಅತೃಪ್ತರನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿ ಹಾಕಿಸುವ ಪ್ರಯತ್ನ ನಡೆದಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ 13 ಶಾಸಕರನ್ನು ಕಟ್ಟಿ ಹಾಕಲು ಇಂದು ಸ್ಪೀಕರ್ ನೀಡಿರುವ ರೂಲಿಂಗ್ ಬ್ರಹ್ಮಾಸ್ತ್ರವಾಗುವ ಸಾಧ್ಯತೆಯಿದೆ.ಶಾಸಕಾಂಗ ಪಕ್ಷದ ನಾಯಕರು ನೀಡಿದ ವಿಪ್ ಅನ್ನು ಉಲ್ಲಂಘಿಸಿದರೆ ಅಂತಹ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರಕ್ಕೆ ಸುಪ್ರೀಂಕೋರ್ಟ್ ತೀರ್ಪಿನಿಂದ ಯಾವುದೇ ಧಕ್ಕೆ ಇಲ್ಲ.

ಶಾಸಕರಿಗೆ ವಿಪ್ ನೀಡಿದಾಗ ಅದನ್ನು ಪಾಲಿಸದಿದ್ದರೆ ನನಗೆ ದೂರು ನೀಡುವ ಜವಾಬ್ದಾರಿ ಶಾಸಕಾಂಗ ಪಕ್ಷದ ನಾಯಕರಿಗಿದೆ.ನನಗೆ ದೂರು ಬಂದ ನಂತರ ಅದನ್ನು ಪರಿಶೀಲಿಸಿ ಸಾಕ್ಷ್ಯಾಧಾರಗಳನ್ನು ಗಮನಿಸಿ ಕಾನೂನು ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರಿವೂ ಇದೆ.ಸುಪ್ರೀಂಕೋರ್ಟ್ ಈ ವಿಷಯದಲ್ಲಿ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪತನದ ಅಂಚಿನಲ್ಲಿದ್ದ ಸರ್ಕಾರಕ್ಕೆ ಈ ಅಂಶ ವರವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಚಿಂತನೆ ನಡೆಸಿದ್ದು, ಅತೃಪ್ತ ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ. ಸರ್ಕಾರ ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿದ್ದು ಅವರನ್ನು ಕಾನೂನಿನ ಮೂಲಕ ಕಟ್ಟಿಹಾಕುವ ವಿಪ್ ಅಸ್ತ್ರವನ್ನು ಪ್ರಯೋಗಿಸಬಹುದಾಗಿದೆ.

ವಿಪ್ ಜಾರಿ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ಸ್ಪಷ್ಟನೆ ಇಲ್ಲದಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಜೂ.13ರಂದು ನಡೆದ ಕಲಾಪದಲ್ಲಿ ಕ್ರಿಯಾಲೋಪವೆತ್ತಿದ್ದರು.ಇದಕ್ಕೆ ಇಂದು ಸ್ಪೀಕರ್ ರೂಲಿಂಗ್ ನೀಡಿ ಶಾಸಕಾಂಗ ಪಕ್ಷದ ನಾಯಕರ ಸೂಚನೆಯನ್ನು ಧಿಕ್ಕರಿಸುವ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರು ನೀಡುವ ಜವಾಬ್ದಾರಿ ಎಲ್ಲಾ ಶಾಸಕಾಂಗ ಪಕ್ಷದ ನಾಯಕರಿಗಿದೆ ಎಂದು ಸ್ಪಷ್ಟಪಡಿಸಿದರು.

ಈ ಹಿನ್ನೆಲೆಯಲ್ಲಿ ಅತೃಪ್ತರ ವಿರುದ್ಧ ತಂತ್ರ ಹೆಣೆಯಲು ಪಕ್ಷದ ಮುಖಂಡರು ಮುಂದಾಗಿದ್ದಾರೆ ಎನ್ನಲಾಗಿದೆ. ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಎಲ್ಲಾ ಶಾಸಕರಿಗೆ ವಿಪ್ ನೀಡುವುದು, ವಿಪ್ ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್‍ಗೆ ದೂರು ನೀಡುವ ಸಾಧ್ಯತೆ ಇದೆ.

ರಾಜೀನಾಮೆ ನೀಡಿರುವ ಶಾಸಕರು ಪಾಲ್ಗೊಳ್ಳುವಂತೆ ಯಾವುದೇ ರೀತಿಯ ಒತ್ತಡ ಹಾಕುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ನಡುವೆ ವಿಪ್ ಜಾರಿಗೊಳಿಸಿ ಉಲ್ಲಂಘನೆ ಮಾಡಿದವರ ವಿರುದ್ಧ ಸ್ಪೀಕರ್ ಅವರು ರೂಲಿಂಗ್ ನೀಡಿದ್ದಾರೆ. ವಿಶ್ವಾಸಮತ ಯಾಚನೆಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಪಕ್ಷೇತರರು ಸಲ್ಲಿಸಿದ್ದ ಅರ್ಜಿಯನ್ನು ನಾಳೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುವುದಾಗಿ ಹೇಳಿದೆ.ಅಲ್ಲದೇ ವಿಶ್ವಾಸ ಮತ ಯಾಚನೆಗೆ ಗಡುವು ವಿಧಿಸಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.ಈ ಎಲ್ಲಾ ಅರ್ಜಿಗಳ ವಿಚಾರಣೆ ನಾಳೆ ಬರುವ ಸಾಧ್ಯತೆ ಇದೆ.
ಅತೃಪ್ತ ಶಾಸಕರನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸಲಾಗುತ್ತದೆಯೇ ಅಥವಾ ಈ ಎಲ್ಲಾ ಗೊಂದಲಗಳಿಗೆ ಸುಪ್ರೀಂಕೋರ್ಟ್ ತೆರೆ ಎಳೆಯಲಿದೆಯೇ ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ