ಬೆಂಗಳೂರು, ಜು.22- ಆಡಿತ ಪಕ್ಷದ ಶಾಸಕರು ರಾಜೀನಾಮೆ ನೀಡಿರುವುದರ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು, ಸದರಿ ಶಾಸಕರನ್ನು ಅನರ್ಹಗೊಳಿಸಲು ಸೂಕ್ತ ಸಾಕ್ಷಾಧಾರಗಳಿವೆ ಎಂದು ವಾದಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2009ರಲ್ಲಿ ಬಿಜೆಪಿ ನಡೆಸಿದ ಆಪರೇಷನ್ ಕಮಲದ ಬಗ್ಗೆ ಸಮಗ್ರ ವಿವರಣೆ ನೀಡಿದರು.
ಇತ್ತೀಚೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಹಣ ಹಾಗೂ ಅಧಿಕಾರದ ಆಮಿಷ ತೋರಿಸಿ ಸೆಳೆದುಕೊಂಡಿದ್ದಾರೆ.ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ಅವರಿಂದ ರಾಜೀನಾಮೆ ಕೊಡಿಸಿದ್ದಾರೆ.ಜಾಧವ್ ಅವರು ಸ್ಪೀಕರ್ ಅವರಿಗೆ ನಾನುಯಾವುದೇ ಪಕ್ಷ ಸೇರುವುದಿಲ್ಲ ಎಂದು ಭರವಸೆ ಕೊಟ್ಟಿದ್ದರು.ಆದರೆ ಬಿಜೆಪಿ ಸೇರಿದ್ದಾರೆ.ಈಗ ಏಕ ಕಾಲಕ್ಕೆ 16ರಿಂದ 17 ಮಂದಿ ಗುಂಪು ಸೇರಲು, ರಾಜೀನಾಮೆ ನೀಡಲು ಬಿಜೆಪಿ ನಾಯಕರೇ ಪ್ರೇರಣೆಯಾಗಿದ್ದಾರೆ.ಅವರು ಮುಂಬೈಗೆ ತೆರಳಲು ಬಿಜೆಪಿಯ ರಾಜ್ಯಸಭಾ ಸದಸ್ಯರೊಬ್ಬರ ವಿಮಾನಗಳನ್ನು ಬಳಸಲಾಗಿದೆ.
ಶಾಸಕರನ್ನು ವಿಮಾನ ಹತ್ತಿಸುವಾಗ ಯಡಿಯೂರಪ್ಪ ಅವರ ಆಪ್ತ ಸಹಾಯಕ ಜತೆಯಲ್ಲಿದ್ದಾರೆ.ಆರ್.ಅಶೋಕ್ ಮತ್ತು ಕೆ.ಜಿ.ಬೋಪಯ್ಯ ಅವರು ರಾಜೀನಾಮೆ ನೀಡಿದ ಶಾಸಕರ ಜತೆ ಇದ್ದಾರೆ ಎಂದು ದಾಖಲೆಗಳನ್ನು ಸಲ್ಲಿಸಿ ಮಾತನಾಡಿದರು.
2009ರ ಆಪರೇಷನ್ ಕಮಲದಲ್ಲಿ ಸೋಮಣ್ಣ, ಜಗ್ಗೇಶ್ ಮತ್ತಿತರರು ಬಿಜೆಪಿ ಸೇರಿದರು ಎಂದು ಸಚಿವರು ಆರೋಪಿಸಿದಾಗ, ಅದನ್ನು ಸೋಮಣ್ಣ ಬಲವಾಗಿ ವಿರೋಧಿಸಿದರು.
ರಾಜೀನಾಮೆ ಕೊಟ್ಟು ಬೇರೆ ಪಕ್ಷ ಸೇರುವುದು ಶಾಸಕರ ಹಕ್ಕು. ನೀವು ಸೇರಿದಂತೆ ಬಹಳಷ್ಟು ಮಂದಿ ಪಕ್ಷಾಂತರ ಮಾಡಿ ಬಂದವರೇ ಆಗಿದ್ದೀರಾ.ಆರೋಪ ಮಾಡುವ ಬದಲು ನಿಮ್ಮ ಬೆನ್ನನ್ನು ನೋಡಿಕೊಳ್ಳಿ ಎಂದು ತಿರುಗೇಟು ನೀಡಿದರು.
ಮುಂದುವರೆದು ಮಾತನಾಡಿದ ಕೃಷ್ಣಬೈರೇಗೌಡ ಅವರು, ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಶಾಸಕರ ಅನರ್ಹತೆಯನ್ನು ಪ್ರಸ್ತಾಪ ಮಾಡಿದರು.ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಾಟಾಗ ರಾಜೀನಾಮೆ ಎಂಬುದು ಶಾಸಕರ ಸ್ವತಂತ್ರ ಹಕ್ಕಾಗುವುದಿಲ್ಲ ಎಂದು ತಮಿಳುನಾಡಿನ ಸ್ಪೀಕರ್ ತೀರ್ಪು ನೀಡಿದ್ದು, ಶಾಸಕರು ಪಕ್ಷಾಂತರ ಮಾಡುತ್ತಿದ್ದಾರೆ ಎಂದು ಮನವರಿಕೆ ಮಾಡಿದರೆ ಅವರನ್ನು ಅನರ್ಹಗೊಳಿಸಲು ಅವಕಾಶವಿದೆ ಎಂದು ಅವರು ವಾದಿಸಿದರು.