ಬೆಂಗಳೂರು, ಜು.22- ವಿಧಾನಸೌಧದಲ್ಲಿ ಶಾಸಕ ಸುಧಾಕರ್ ಮೇಲೆ ಹಲ್ಲೆ ನಡೆಸಿರುವ ಕುರಿತು ಸದರಿ ಶಾಸಕರು ನನಗೆ ದೂರು ಕೊಟ್ಟಿಲ್ಲ. ದೂರು ಕೊಟ್ಟರೆ ನಾನು ಕ್ರಮ ಜರುಗಿಸುತ್ತೇನೆ ಎಂದು ಸ್ಪೀಕರ್ ಹೇಳಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿ ಜೆ.ಸಿ.ಮಾಧುಸ್ವಾಮಿ ಅವರು, ವಿಧಾನಸೌಧದಲ್ಲಿ ಶಾಸಕರೊಬ್ಬರ ಕೊರಳಪಟ್ಟಿ ಹಿಡಿದು ಎಳೆದು ಹಲ್ಲೆ ನಡೆಸಲಾಗಿದೆ.ನಾನು ಈ ಬಗ್ಗೆ ನಿಮಗೆ ದೂರು ಕೊಟ್ಟಿದ್ದೇನೆ ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಅವರು, ಹಲ್ಲೆಗೆ ಒಳಗಾದವರು ದೂರು ಕೊಟ್ಟಿಲ್ಲ. ಅವರ ಪರವಾಗಿ ನೀವು ದೂರುಕೊಡುವುದು ಎಷ್ಟು ಸರಿ.ಈಗಲೂ ಹಲ್ಲೆಗೊಳಗಾದವರು ದೂರು ಕೊಟ್ಟರೆ ನಾನು ಕ್ರಮ ಕೈಗೊಳ್ಳುತ್ತೇನೆ ಎಂದರು.
ಆ ಘಟನೆ ನಡೆದಾಗ ಶಾಸಕ ಸುಧಾಕರ್ ಹಾಗೂ ಸಚಿವ ಎಂ.ಟಿ.ಬಿ.ನಾಗರಾಜ್ ನನ್ನ ಬಳಿ ಬಂದು ರಾಜೀನಾಮೆ ಸಲ್ಲಿಸಿದರು. ನಾನು ಅವರಿಗೆ ಟೀ ಕುಡಿಸಿ ಕಳುಹಿಸಿದೆ.ಹೊರಗೆ ಬಂದಾಗ ಏನಾಯಿತೋ ಗೊತ್ತಿಲ್ಲ. ನನಗೆ ಲಿಖಿತವಾಗಿ ಯಾರೂ ಮಾಹಿತಿ ಕೊಟ್ಟಿಲ್ಲ. ಘಟನೆ ಬಗ್ಗೆ ವಿಷಯ ತಿಳಿದ ತಕ್ಷಣ ನಾನು ನಮ್ಮ ಮಾರ್ಷಲ್ ಅವರನ್ನು ಕಳುಹಿಸಿದೆ.ಆಗ ಅವರ್ಯಾರೂ ಇರಲಿಲ್ಲ ಎಂದು ಹೇಳಿದರು.