ಮೈತ್ರಿಪಕ್ಷಗಳ ನಾಯಕರಲ್ಲಿ ಪರಸ್ಪರ ನಂಬಿಕೆಯಿಲ್ಲ-ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು, ಜು.21- ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಗೊಂದಲಗಳಿಗೆ ಅಂತ್ಯವಾಡಬೇಕಾದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಉದ್ಬವವಾಗುತ್ತಲೇ ಇವೆ. ಉಭಯ ಪಕ್ಷಗಳ ನಾಯಕರಲ್ಲಿ ಪರಸ್ಪರ ನಂಬಿಕೆ ಇಲ್ಲ. ಇಂತಹ ಸರ್ಕಾರ ಜನರ ಪಾಲಿಗೆ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಅನಿಶ್ಚಿತತೆ ಕೊನೆಗಾಣಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು. ಇದು ಲಕ್ಷಾಂತರ ಕಾರ್ಯಕರ್ತರ ಒತ್ತಾಸೆಯೂ ಹೌದು.ಸಮ್ಮಿಶ್ರ ಸರ್ಕಾರ ಪತನವಾದರೆ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಸರ್ಕಾರ ರಚನೆ ಮಾಡಲು ಸಿದ್ಧವಾಗಿದೆ ಎಂದರು.

ಶಾಸಕರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಮುಖಂಡರು ಸರ್ಕಾರ ಉಳಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ಅತೃಪ್ತರ ಮನವೊಲಿಕೆ ಸಾಧ್ಯವಾಗದಿದ್ದಾಗ ಬೇರೆ ಬೇರೆ ಪಕ್ಷಗಳ ಶಾಸಕರನ್ನು ಸೆಳೆದು ಕುರ್ಚಿ ಉಳಿಸಿಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ನಾವು ರಾಷ್ಟ್ರಪತಿ ಆಡಳಿತ ಏರುವ ಬಗ್ಗೆ ಯಾವ ಆಲೋಕಚನೆಯನ್ನೂ ಮಾಡಿಲ್ಲ. ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಪ್ರತಿ ತಿಂಗಳು ಕೇಂದ್ರ ಗೃಹ ಇಲಾಖೆ ಹಾಗೂ ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸುವುದು ವಾಡಿಕೆಯಾಗಿದೆ.
ಅದರಂತೆ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ರಾಜ್ಯಪಾಲರು ಕೇಂದ್ರಕ್ಕೆ ವರದಿ ನೀಡಿರಬಹುದು.ಅವರು ವರದಿ ನೀಡಿದ ತಕ್ಷಣವೇ ರಾಷ್ಟ್ರಪತಿ ಆಡಳಿತ ಜಾರಿಯಾಗುತ್ತದೆ ಎಂದು ಯಾರೊಬ್ಬರೂ ಭಾವಿಸಬಾರದು ಎಂದು ಹೇಳಿದರು.

ಅಷ್ಟಕ್ಕೂ ರಾಜ್ಯಪಾಲರು ಕೇಂದ್ರಕ್ಕೆ ಯಾವ ವರದಿ ಸಲ್ಲಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ರಾಜ್ಯಗಳ ವಿಷಯದಲ್ಲಿ ಕೇಂದ್ರವು ಅನಗತ್ಯವಾಗಿ ಹಸ್ತಕ್ಷೇಪ ಮಾಡುವುದಿಲ್ಲ. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದರೆ ಮಾತ್ರ ಕಾನೂನಿನ ಪ್ರಕಾರವೇ ಕ್ರಮ ತೆಗೆದುಕೊಳ್ಳುತ್ತದೆ.ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಕ್ಕೆ ನಾಳೆ ಮುಕ್ತಿ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ನಾವು 105 ಶಾಸಕರನ್ನು ಹೊಂದಿದ್ದೇವೆ. ಜತೆಗೆ ಇಬ್ಬರು ಪಕ್ಷೇತರ ಶಾಸಕರು ಬೆಂಬಲ ಸೂಚಿಸುತ್ತಿದ್ದಾರೆ.ಬಿಜೆಪಿ ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಪಷ್ಟ ಜನಾದೇಶ ಹೊಂದಿದೆ.ನಾಳೆ ವಿಶ್ವಾಸ ಮತಯಾಚನೆ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದರೆ ಸೋಲು ಕಟಿಟ್ಟ ಬುತ್ತಿ. ಹೀಗಾಗಿ ಕೊನೆ ಕ್ಷಣದವರೆಗೂ ಭಿನ್ನಮತೀಯರನ್ನು ಹೋಲೈಸಲು ನಡೆಸುತ್ತಿರುವ ಕಸರತ್ತುಗಳು ವಿಫಲ ಪ್ರಯತ್ನ ಎಂದು ಸದಾನಂದಗೌಡ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ