
ಬೆಂಗಳೂರು, ಜು.21-ನಾಳೆ ಸಂಜೆಯೊಳಗೆ ವಿಶ್ವಾಸಮತಯಾಚನಾ ನಿರ್ಣಯದಲ್ಲಿ ಯಶಸ್ವಿಯಾಗುತ್ತೇವೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವಪ್ರೇರಣೆಯಿಂದ ವಿಶ್ವಾಸಮತ ಯಾಚನೆ ನಿರ್ಣಯವನ್ನು ಮಂಡಿಸಿದ್ದಾರೆ.ಅದರ ಬಗ್ಗೆ ನಾಳೆ ಚರ್ಚೆ ನಡೆದು ಸಂಜೆಯೊಳಗೆ ವಿಶ್ವಾಸ ಮತ ಯಾಚನೆ ಮಾಡುತ್ತೇವೆ ಎಂದರು.
ವಿಶ್ವಾಸಮತ ಯಾಚನೆಯನ್ನು ಮುಂದೂಡುವ ಪ್ರಶ್ನೆ ಬರುವುದಿಲ್ಲ. ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ ಎಂದ ಅವರು, ಅಧಿವೇಶನದಲ್ಲಿ ಸರ್ಕಾರದ ತಪ್ಪು-ಒಪ್ಪುಗಳ ಬಗ್ಗೆ ವಿಷಯ ಪ್ರಸ್ತಾಪಿಸದೆ ಬಿಜೆಪಿ ತೆಪ್ಪಗೆ ಕುಳಿತಿದೆ ಎಂದು ಟೀಕಿಸಿದರು.
ವಿಶ್ವಾಸಮತವನ್ನು ಸಾಬೀತುಪಡಿಸಲು ಗಡುವು ನೀಡಿ ರಾಜ್ಯಪಾಲರು ಮೂರು ಪತ್ರಗಳನ್ನು ಬರೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ಹಕ್ಕನ್ನು ಮೊಟಕುಗೊಳಿಸಲು ವಿಧಾನಸಭಾಧ್ಯಕ್ಷರಿಗೂ ಅಧಿಕಾರವಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.