ಬೆಂಗಳೂರು, ಜು.21- ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಿನ್ನಮತೀಯ ಶಾಸಕರು ಸದನಕ್ಕೆ ಬರುವುದಿಲ್ಲ ಎಂಬ ದೃಢ ಸಂದೇಶವನ್ನು ರವಾನಿಸಿದ್ದಾರೆ.
ನಮ್ಮನ್ನು ಎಷ್ಟೇ ಮನವೊಲಿಸಿದರೂ ತಲೆಕೆಡಿಸಿಕೊಳ್ಳುವುದಿಲ್ಲ. ನಾವು ನಡೆದು ಬಂದ ದಾರಿ ಬಹುದೂರ ಸಾಗಿದ್ದು, ಪುನಃ ಮರಳಿ ಮಾತೃಪಕ್ಷಕ್ಕೆ ಹಿಂದಿರುಗುವ ಪ್ರಶ್ನೆಯೇ ಇಲ್ಲ. ನಮ್ಮನ್ನು ಯಾರೊಬ್ಬರೂ ಮನವೊಲಿಸುವ ಪ್ರಯತ್ನ ಮಾಡಬಾರದು. ಅಲ್ಲದೆ ಸಂಧಾನಕ್ಕೂ ಬರಬಾರದು ಎಂಬ ನಿಲುವಿಗೆ ಅತೃಪ್ತರು ಬಂದಿದ್ದಾರೆ.
ಮೂರು ಪ್ರತ್ಯೇಕ ತಂಡಗಳಲ್ಲಿರುವ ಒಟ್ಟು 15 ಭಿನ್ನಮತೀಯ ಶಾಸಕರನ್ನು ಪೂನಾ, ಮುಂಬೈ ಹಾಗೂ ಗೋವಾದ ಲೋನಾವಾಲಾದಲ್ಲಿ ಇಡಲಾಗಿದೆ.
ಮುಂಬೈನ ರಿನೆಸೈನ್ಸ್ ಹೋಟೆಲ್‍ನಲ್ಲಿ ರಮೇಶ್ ಜಾರಕಿಹೊಳಿ ತಂಡ ವಾಸ್ತವ್ಯ ಹೂಡಿದೆ. ಇವರೊಂದಿಗೆ ಶಾಸಕರಾದ ಪ್ರತಾಪ್‍ಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ಎಂ.ಟಿ.ಬಿ.ನಾಗರಾಜ್, ಸುಧಾಕರ್ ಸೇರಿದಂತೆ ಐದು ಮಂದಿ ಇದ್ದಾರೆ.
ಪೂಣೆಯಲ್ಲಿ ವಾಸ್ತವ್ಯ ಹೂಡಿರುವ ಎರಡನೇ ತಂಡದಲ್ಲಿ ಬಿ.ಸಿ.ಪಾಟೀಲ್, ರೋಷನ್ ಬೇಗ್, ಆರ್.ಶಂಕರ್, ಎಚ್.ನಾಗೇಶ್ ಸೇರಿದಂತೆ ಐದು ಮಂದಿ ಇದ್ದಾರೆ.
ಗೋವಾ ಸಮೀಪವಿರುವ ಲೋನಾವಾಲಾದಲ್ಲಿರುವ ತಂಡದಲ್ಲಿ ಶಾಸಕರಾದ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಗೋಪಾಲಯ್ಯ ಇದ್ದಾರೆ ಎಂದು ತಿಳಿದು ಬಂದಿದೆ.
ಒಂದೇ ಹೋಟೆಲ್‍ನಲ್ಲಿ ಬೀಡುಬಿಟ್ಟರೆ ಮನವೊಲಿಸಬಹುದೆಂಬ ಹಿನ್ನೆಲೆಯಲ್ಲಿ ಯಾರ ಕೈಗೂ ಸಿಗದಂತೆ ಮೂರು ತಂಡಗಳನ್ನಾಗಿ ರಚನೆ ಮಾಡಲಾಗಿದ್ದು, ಈ ಮೂರು ತಂಡಗಳು ದೂರವಾಣಿಯಲ್ಲಿ ಮಾತ್ರ ಸಂಪರ್ಕಿಸಬಹುದು.
ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತಯಾಚನೆ ಪ್ರಸ್ತಾವನೆ ನಂತರ ಸರ್ಕಾರ ಬಿದ್ದು ಹೋದರೆ ನಂತರ ಇವರೆಲ್ಲರೂ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಕುಮಾರಸ್ವಾಮಿ ರಾಜೀನಾಮೆ ನೀಡುವವರೆಗೂ ಯಾವುದೇ ಕಾರಣಕ್ಕೂ ಹಿಂದಿರುಗಬಾರದೆಂಬ ದೃಢ ನಿರ್ಧಾರಕ್ಕೆ ಬಂದಿರುವ ಅತೃಪ್ತರು ನಾಳಿನ ಬೆಳವಣಿಗೆ ನಂತರ ತಮ್ಮ ಮುಂದಿನ ನಡೆಯನ್ನು ಪ್ರಕಟಿಸಲಿದ್ದಾರೆ.
ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮನವೊಲಿಸಿ ಸರ್ಕಾರ ಉಳಿಸಿಕೊಳ್ಳಬಹುದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಅತೃಪ್ತರು ಯಾರ ಕೈಗೂ ಸಿಗದಂತೆ ಉಳಿದುಕೊಂಡಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ವಾಪಸ್ ಪಡೆದಿರುವ ರಾಮಲಿಂಗಾರೆಡ್ಡಿ ತಮ್ಮನ್ನು ಮನವೊಲಿಸಬಹುದು ಎಂಬ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅವರ ದೂರವಾಣಿ ಕರೆಗಳನ್ನೂ ಸ್ಥಗಿತಗೊಳಿಸಲಾಗಿದೆ.
ಮಹಾರಾಷ್ಟ್ರದ ಪ್ರಭಾವಿ ನಾಯಕರೊಂದಿಗೆ ಮಾತ್ರ ಇವರು ಮಾತುಕತೆ ನಡೆಸುತ್ತಿದ್ದು, ನಾಳೆ ನಡೆಯಲಿರುವ ಬೆಳವಣಿಗೆಗಳನ್ನು ಆಧರಿಸಿ ಅತೃಪ್ತರೆಲ್ಲರೂ ಒಂದೇ ಬಾರಿಗೆ ನಗರಕ್ಕೆ ವಾಪಸ್ ಬರಲಿದ್ದಾರೆ ಎಂದು ತಿಳಿದು ಬಂದಿದೆ.