ಸುಪ್ರೀಂಕೋರ್ಟ್ ತೀರ್ಪನ್ನು ಎದರು ನೋಡುತ್ತಿರುವ ಜೆಡಿಎಸ್

ಬೆಂಗಳೂರು, ಜು.20- ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ್ದು, ಅದನ್ನು ಪಾರು ಮಾಡಲು ಹರಸಾಹಸ ಮಾಡುತ್ತಿರುವ ಜೆಡಿಎಸ್ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನೇ ಎದುರು ನೋಡುತ್ತಿದೆ.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದ್ದು, ಚರ್ಚೆಯೂ ಪ್ರಾರಂಭವಾಗಿದೆ. ಈ ಹಂತದಲ್ಲಿ ರಾಜೀನಾಮೆ ನೀಡಿರುವ ಶಾಸಕರಿಗೆ ವಿಪ್ ಅನ್ವಯವಾಗುವ ಕುರಿತಂತೆ ಇರುವ ಗೊಂದಲವನ್ನು ಬಗೆಹರಿಸಿಕೊಳ್ಳಲು ಈಗಾಗಲೇ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿದೆ.

ಅಲ್ಲದೆ, ವಿಶ್ವಾಸಮತ ಯಾಚನೆಯ ನಿರ್ಣಯದ ಮೇಲಿನ ಚರ್ಚೆ ವಿಧಾನಸಭೆಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲೇ ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಗಡುವು ನೀಡಿರುವ ವಿಚಾರ ಕುರಿತಂತೆಯೂ ಜೆಡಿಎಸ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ.ಈ ಎರಡೂ ವಿಚಾರಗಳಲ್ಲಿ ಸುಪ್ರೀಂಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಲಾಗುತ್ತಿದೆ.

ಸೋಮವಾರ ಸುಪ್ರೀಂಕೋರ್ಟ್‍ನಲ್ಲಿ ಜೆಡಿಎಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬರುವ ಸಾಧ್ಯತೆಗಳಿದ್ದು, ಕೋರ್ಟ್ ತೀರ್ಪನ್ನಾಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಜೆಡಿಎಸ್ ವರಿಷ್ಠರು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆ ಪ್ರಯತ್ನಗಳು ಇದುವರೆಗೂ ನಿರೀಕ್ಷಿತ ಫಲ ನೀಡಿಲ್ಲ. ಹೀಗಾಗಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಪರ್ಯಾಯ ಮಾರ್ಗ ಹಾಗೂ ಕಾನೂನು ಹೋರಾಟವನ್ನು ಮುಂದುವರಿಸಲಾಗುತ್ತಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಮುಂದೆ ಪರ್ಯಾಯ ಆಯ್ಕೆಗಳಿಲ್ಲ. ಸೋಮವಾರದೊಳಗೆ ಅತೃಪ್ತ ಶಾಸಕರು ಮರಳಿ ಬಂದರೆ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಬಲ ದೊರೆಯಲಿದೆ.ಇಲ್ಲದಿದ್ದರೆ ಸರ್ಕಾರ ಉಳಿಸಿಕೊಳ್ಳುವುದು ಕಷ್ಟ.ಸುಪ್ರೀಂಕೋರ್ಟ್‍ನಲ್ಲಿ ಜೆಡಿಎಸ್ ಪರವಾಗಿ ತೀರ್ಪು ಬಂದರೆ ವಿಶ್ವಾಸಮತ ಯಾಚನೆಯ ನಿರ್ಣಯದ ಮೇಲಿನ ಚರ್ಚೆಯನ್ನು ಮತ್ತಷ್ಟು ಮುಂದುವರಿಸುವ ಸಾಧ್ಯತೆಯ ಬಗ್ಗೆಯೂ ಚಿಂತನೆ ನಡೆಸಲಾಗಿದೆ.
ಒಂದು ವೇಳೆ ಪಕ್ಷಕ್ಕೆ ವ್ಯತಿರಿಕ್ತ ತೀರ್ಪು ನ್ಯಾಯಾಲಯದಿಂದ ದೊರೆತರೆ ಬಹುತೇಕ ಸೋಮವಾರವೇ ವಿಶ್ವಾಸಮತದ ಯಾಚನೆ ಮೇಲಿನ ನಿರ್ಣಯದ ಚರ್ಚೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ