ಬೆಂಗಳೂರು,ಜು.20- ಅತೃಪ್ತರು ಬರೋವರೆಗೂ ನಾವು ಸದನವನ್ನು ನಡೆಸಲ್ಲ ಎಂಬ ದೋಸ್ತಿಗಳ ಧೋರಣೆ ಸರಿಯಲ್ಲ. ಇದೊಂದು ರೀತಿ ಲಜ್ಜೆಗೆಟ್ಟ ಸರ್ಕಾರ ಎಂದು ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ರಮಡ ರೆಸಾರ್ಟ್ನಲ್ಲಿ ತಂಗಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅತೃಪ್ತರು ಬರೋ ಹಾಗಿದ್ದರೆ ಕರೆದುಕೊಂಡು ವಿಶ್ವಾಸ ಮತ ಯಾಚನೆ ಮಾಡಲಿ. ಆದರೆ ಕಾಲಹರಣ ಮಾಡೋದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತೃಪ್ತರನ್ನ ಮನವೊಲಿಸ್ತಾರೋ ಏನು ಮಾಡ್ತಾರೋ ನಮಗೆ ಗೊತ್ತಿಲ್ಲ. ಆದರೆ ವಿಶ್ವಾಸ ಮತ ಯಾಚನೆ ಮಾಡಿ.ಈ ಆಟಗಳನ್ನೆಲ್ಲ ಜನ ನೋಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನೈತಿಕತೆ ಇದ್ದರೆ ವಿಶ್ವಾಸ ಮತಯಾಚನೆ ಮಾಡಿ.ಸುಮ್ಮನೆ ಕಾಲ ಹರಣ ಮಾಡೋದು ಸರಿಯಲ್ಲ ಎಂದು ವಿಶ್ವನಾಥ್ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಕೆಲವರು ಸದನದ ಬೆಂಬಲ ಇಲ್ಲ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದಾರೆಂದು ಮುಖ್ಯಮಂತ್ರಿ ಹೇಳಿದ್ದರು. ಸಿಎಂ ವಿಶ್ವಾಸಮತ ಯಾಚನೆಗೆ ನಾವು ಒಪ್ಪಿಕೊಂಡೆವು.9, 10, 12, 13 ನೇ ವಿಧಾನಸಭೆಯಲ್ಲೂ ಒಂದೇ ದಿನಕ್ಕೆ ವಿಶ್ವಾಸಮತ ಪ್ರಕ್ರಿಯೆ ನಡೆದಿದೆ ಎಂದರು.
ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ.ಸಂಖ್ಯಾಬಲ ಇಲ್ಲದಿದ್ದ ಮೇಲೆ ಇದೆಲ್ಲ ಮಾಡೋದಕ್ಕೆ ಯಾವ ನೈತಿಕತೆ ಇದೆ. ವಿಧಾನಸಭೆಯಲ್ಲಿ ಹರಿಕಥೆ ಹೇಳಿ ಕುಳಿತುಕೊಳ್ಳುತ್ತಿದ್ದಾರೆ. ಈ ರಾಜ್ಯದ ಬಗ್ಗೆ ಕಳಕಳಿ ಇದ್ದರೆ ವಿಶ್ವಾಸಮತ ಕೇಳಿ ಬೆಂಬಲ ಇದ್ದರೆ ನೀವೇ ಅಧಿಕಾರ ನಡೆಸಿ.ರಾಜ್ಯಪಾಲರು ಇದೇ ಮೊದಲ ಬಾರಿ ಸದನ ನಡೆಯುವ ಸಮಯದಲ್ಲಿ ಮಧ್ಯಪ್ರವೇಶಿಸಿದ್ದಾರೆ ಎಂದು ಅವರು ಮೈತ್ರಿ ನಾಯಕರ ವಿರುದ್ಧ ಕಿಡಿಕಾರಿದರು.