ಬೆಂಗಳೂರು: ಐಎಂಎ ಜ್ಯುವೆಲರ್ಸ್ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ನನ್ನು ಜಾರಿ ನಿರ್ದೇಶನ ಅಧಿಕಾರಿಗಳು (ಇಡಿ) ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದಿದ್ದಾರೆ. ಮನ್ಸೂರ್ ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಇಡಿ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ.
ಸದ್ಯ, ವೈದ್ಯಕೀಯ ಪರೀಕ್ಷೆಗೆ ಅಧಿಕಾರಿಗಳು ಮನ್ಸೂರ್ ಖಾನ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಬಳಿಕ ಮನ್ಸೂರ್ ಖಾನ್ನನ್ನು ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಕರೆ ತರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಶೀಘ್ರದಲ್ಲೇ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ವೇಳೆ ಶಾಸಕ ರೋಷನ್ ಬೇಗ್ ಬಗ್ಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಗುರುವಾ ತಡರಾತ್ರಿ ದುಬೈನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಮನ್ಸೂರ್ ಆಗಮಿಸಿದ್ದ. ದೆಹಲಿಗೆ ಬರುತ್ತಿದ್ದಂತೆ ವಶಕ್ಕೆ ಪಡೆಯಲು ಯೋಚಿಸಿದ್ದ ಎಸ್ಐಟಿಗೂ ಮುನ್ನವೇ ಇಡಿ ಅಧಿಕಾರಿಗಳು ಮನ್ಸೂರ್ನನ್ನು ವಶಕ್ಕೆ ಪಡೆದಿದ್ದರು. ಮನ್ಸೂರ್ ಭಾರತಕ್ಕೆ ಬರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಎಸ್ಐಟಿಯ ಒಂದು ತಂಡ ದೆಹಲಿ ಏರ್ಪೋರ್ಟ್ ನಲ್ಲಿ ಬೀಡು ಬಿಟ್ಟಿತ್ತು. ಆದರೆ, ಏರ್ಪೋರ್ಟ್ನಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಎಸ್ಐಟಿ ಬದಲಿಗೆ ಕೇಂದ್ರ ತನಿಖಾ ಸಂಸ್ಥೆ ಇಡಿ ವಶಕ್ಕೆ ಮನ್ಸೂರ್ ಖಾನ್ನನ್ನು ನೀಡಿದ್ದರು. ಮನ್ಸೂರ್ ಖಾನ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ನೀಡಲಾಗಿತ್ತು. ಇದುವರೆಗೂ 40 ಸಾವಿರಕ್ಕೂ ಹೆಚ್ಚು ದೂರುಗಳು ಮನ್ಸೂರ್ ಖಾನ್ ವಿರುದ್ಧ ದಾಖಲಾಗಿವೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಮಹಮ್ಮದ್ ಮನ್ಸೂರ್ಗಾಗಿ ಎಸ್ಐಟಿ ಮತ್ತು ಇಡಿ ತಂಡ ಶೋಧ ನಡೆಸಿತ್ತು. ಮನ್ಸೂರ್ ಖಾನ್ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಶಿವಾಜಿನಗರ ಶಾಸಕ ರೋಷನ್ ಬೇಗ್ ಹೆಸರನ್ನೂ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ 3 ದಿನಗಳ ಹಿಂದೆ ರೋಷನ್ ಬೇಗ್ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದ ಎಸ್ಐಟಿ ತಂಡ ವಿಚಾರಣೆ ನಡೆಸಿತ್ತು.