ಬೆಂಗಳೂರು,ಜು.20- ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಮನ್ಸೂರ್ ಖಾನ್‍ನನ್ನು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.
ಗುರುವಾರ ದೆಹಲಿಯಲ್ಲಿ ಮನ್ಸೂರ್ ಖಾನ್‍ನನ್ನು ತಮ್ಮ ವಶಕ್ಕೆ ಪಡೆದ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿ ಇಂದು ಬಿಗಿ ಭದ್ರತೆಯೊಂದಿಗೆ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು ಮನ್ಸೂರ್ ಖಾನ್‍ನನ್ನು ತಮ್ಮ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇಡಿ ಅಧಿಕಾರಿಗಳು ಬಹುಕೋಟಿ ಹಗರಣದ ತನಿಖೆಯಲ್ಲಿ ಬಹಳಷ್ಟು ಸೂಕ್ಷ್ಮ ಮಾಹಿತಿಗಳನ್ನು ಪಡೆಯಬೇಕಿರುವುದರಿಂದ ತನಿಖೆಗೆ ಅನುಕೂಲವಾಗಲು ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದು, ಇಡಿ ಮನವಿಯನ್ನು ಪರಿಗಣಿಸಿರುವ ನ್ಯಾಯಾಲಯ ಜು.23ರವರೆಗೂ ಇಡಿ ವಶಕ್ಕೆ ಒಪ್ಪಿಸಿದೆ.
ಬಂಧನದ ಹಿನ್ನೆಲೆ: ದುಬೈನಿಂದ ಮನ್ಸೂರ್ ಖಾನ್ ದೆಹಲಿಗೆ ವಿಮಾನದಲ್ಲಿ ಬರುತ್ತಿದ್ದಾನೆ ಎಂಬ ಖಚಿತ ಸುಳಿವಿನ ಮೇರೆಗೆ ದೆಹಲಿಗೆ ತೆರಳಿದ್ದ ವಿಶೇಷ ತನಿಖಾ ತಂಡ ಹಾಗೂ ಜಾರಿ ನಿದೇಶನಾಲಯದ ಅಧಿಖಾರಿಗಳು ನಿನ್ನೆ ಮುಂಜಾನೆ 1.50ರ ಸುಮಾರಿನಲ್ಲಿ ಮನ್ಸೂರ್ ಖಾನ್‍ನನ್ನು ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣದಲ್ಲೇ ಬಂಧಿಸಿದರು.
ಪ್ರಾಥಮಿಕ ಹಂತದಲ್ಲಿ ಸುದೀರ್ಘವಿಚಾರಣೆ ನಡೆಸಲು ಗೌಪ್ಯ ಸ್ಥಳದಲ್ಲಿಟ್ಟು ಹಲವು ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಐಎಂಎ ಜ್ಯುವೆಲರಿಯಲ್ಲಿ ಎಷ್ಟು ಮಂದಿ ಎಷ್ಟು ಹಣವನ್ನು ಹೂಡಿಕೆ ಮಾಡಿದ್ದಾರೆ, ಯಾರ್ಯಾರಿಗೆ ನೀವು ಹಣ ಕೊಟ್ಟಿದ್ದೀರಿ, ಯಾರ್ಯಾರಿಂದ ಮೋಸ ಹೋಗಿ ದೇಶ ಬಿಟ್ಟು ಹೋಗಿದ್ದೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಮನ್ಸೂರ್ ಖಾನ್ ಐಎಂಎ ಸಂಸ್ಥೆಯಲ್ಲಿ ಜನರು ಹೂಡಿಕೆ ಮಾಡಿದ್ದ ಕೋಟ್ಯಂತರ ಹಣದೊಂದಿಗೆ ಜೂ.8ರಂದು ದೇಶ ಬಿಟ್ಟು ಪರಾರಿಯಾಗಿದ್ದ. ನಂತರ ಈತ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ಹಲವು ಪ್ರಭಾವಿ ವ್ಯಕ್ತಿಗಳು ನನ್ನಿಂದ ಹಣ ಪಡೆದುಕೊಂಡು ಹಿಂದಿರುಗಿಸದೆ ಮೋಸ ಮಾಡಿದ್ದಾರೆ ಎಂಬ ಬಗ್ಗೆ ಉಲ್ಲೇಖಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಇಡಿ ಅಧಿಕಾರಿಗಳು ತನ್ನ ವಶಕ್ಕೆ ನೀಡಬೇಕೆಂದು ಕೋರ್ಟ್ ಮನವಿ ಮಾಡಿದ ಹಿನ್ನೆಲೆಯಲ್ಲಿ ಆರೋಪಿ ಮನ್ಸೂರ್ ಖಾನ್‍ನನ್ನು ಇಡಿ ವಶಕ್ಕೆ ನೀಡಲಾಗಿದೆ.