ಬೆಂಗಳೂರು, ಜು.20- ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲದಿದ್ದರೂ, ಪತನದಂಚಿನಲ್ಲಿದ್ದರೂ ವಿವಿಧ ಇಲಾಖೆಗಳ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೆ ಮಾತ್ರ ನಿರಂತರವಾಗಿ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ಆರೋಪಿಸಿದರು.
ಬೆಂಗಳೂರಿನ ಯಲಹಂಕ ಸಮೀಪದ ರಮಾಡ ರೆಸಾರ್ಟ್ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಆದರೂ ಈ ನಡುವೆಯೇ ಸಾವಿರಾರು ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಪ್ರಕ್ರಿಯೆ ನಡೆಯುತ್ತಿದೆ.ಸಾವಿರಾರು ಫೈಲ್ಗಳನ್ನು ವಿಲೇವಾರಿ ಮಾಡಲಾಗುತ್ತಿದೆ.ವರ್ಗಾವಣೆ ಮಾಡುವುದಕ್ಕೆ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರಕ್ಕೆ ರಾಜ್ಯದ ಬಗ್ಗೆ ಕಳಕಳಿ ಇದ್ದರೆ ಮೊದಲು ವಿಶ್ವಾಸಮತ ಯಾಚಿಸಲಿ.ಅವರಿಗೆ ಬೆಂಬಲವಿದ್ದರೆ ಅಧಿಕಾರದಲ್ಲಿ ಮುಂದುವರಿಯಲಿ.ಆದರೆ, ವಿಶ್ವಾಸಮತ ಯಾಚಿಸದೆ ಸದನದಲ್ಲಿ ಹರಿಕಥೆ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ.ಇದೆಂಥ ಸಂಪ್ರದಾಯ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸೋಮವಾರ ಕಡೆಯ ದಿನವಾಗಿದೆ ಎಂದು ಗೋವಿಂದ ಕಾರಜಾಳ ಟೀಕಿಸಿದರು.