ಸೋಮವಾರದವರೆಗೂ ರೆಸಾರ್ಟ್‍ನಲ್ಲೇ ಉಳಿಯಲಿರುವ ಜೆಡಿಎಸ್ ಶಾಸಕರು

ಬೆಂಗಳೂರು, ಜು.20- ಆಪರೇಷನ್ ಕಮಲದ ಭೀತಿಯಿಂದ ಜೆಡಿಎಸ್ ಶಾಸಕರು ಸೋಮವಾರದವರೆಗೂ ರೆಸಾರ್ಟ್‍ನಲ್ಲೇ ಉಳಿಯಲಿದ್ದಾರೆ.
ಸೋಮವಾರ ರೆಸಾರ್ಟ್‍ನಿಂದಲೇ ವಿಧಾನಸಭೆ ಅಧಿವೇಶನಕ್ಕೆ ಎಲ್ಲರೂ ಒಟ್ಟಾಗಿ ಬಸ್‍ನಲ್ಲಿ ಆಗಮಿಸಲು ತೀರ್ಮಾನಿಸಿದ್ದಾರೆ.
ಕಳೆದ ಹತ್ತು-ಹನ್ನೆರಡು ದಿನಗಳಿಂದ ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲೇ ಬೀಡುಬಿಟ್ಟಿರುವ ಜೆಡಿಎಸ್ ಶಾಸಕರು ಅಲ್ಲಿಂದಲೇ ನಾಲ್ಕು ದಿನ ನಡೆದ ವಿಧಾನಸಭೆ ಅಧಿವೇಶನಕ್ಕೆ ಆಗಮಿಸಿದ್ದರು.

ಅಧಿವೇಶನ ಮುಗಿದ ಬಳಿಕ ಮತ್ತೆ ರೆಸಾರ್ಟ್‍ಗೆ ತೆರಳುತ್ತಿದ್ದರು.ಈಗಾಗಲೇ ಪಕ್ಷದ ಮೂರು ಮಂದಿ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಆದರೆ, ಮನವೊಲಿಕೆ ಪ್ರಯತ್ನಗಳಿಗೆ ಅವರು ಸ್ಪಂದಿಸುತ್ತಿಲ್ಲ. ಹೀಗಾಗಿ ಉಳಿದಿರುವ ಪಕ್ಷದ ಶಾಸಕರು ಕೈತಪ್ಪಿ ಹೋಗದಂತೆ ಒಂದೆಡೆ ಒಟ್ಟಾಗಿ ಸೇರಿಸಿದ್ದಾರೆ.

ಉಳಿದಿರುವ ಯಾವ ಶಾಸಕರೂ ಕೂಡ ಬಿಜೆಪಿಯವರ ಸಂಪರ್ಕಕ್ಕೆ ಸಿಗಬಾರದು ಮತ್ತು ಆಪರೇಷನ್ ಕಮಲಕ್ಕೆ ಒಳಗಾಗಬಾರದೆಂದು ಎಲ್ಲರನ್ನೂ ರೆಸಾರ್ಟ್‍ನಲ್ಲೇ ಉಳಿಸಿಕೊಳ್ಳಲಾಗಿದೆ.
ವಿಧಾನಸಭೆಯಲ್ಲಿ ಈಗಾಗಲೇ ಕೋರಲಾಗಿರುವ ವಿಶ್ವಾಸಮತಯಾಚನೆಯ ನಿರ್ಣಯದ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಶಾಸಕರೆಲ್ಲರೂ ಒಟ್ಟಾಗಿರಬೇಕು. ಯಾರೂ ಕೂಡ ಧೈರ್ಯಗೆಡಬಾರದು. ಪರಿಸ್ಥಿತಿ ಏನೇ ಆದರೂ ಒಗ್ಗಟ್ಟಿನಿಂದ ಎದುರಿಸೋಣ ಎಂಬ ಧೈರ್ಯವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕರಿಗೆ ನೀಡಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಕೊನೆ ಪ್ರಯತ್ನಗಳ ಬಗ್ಗೆಯೂ ಶಾಸಕರಿಗೆ ಮಾಹಿತಿ ನೀಡಿದ್ದಾರೆ.
ಸರ್ಕಾರಕ್ಕೆ ಎದುರಾಗಿರುವ ಸಂಕಷ್ಟ ಪರಿಹಾರಕ್ಕೆ ಅನುಸರಿಸುತ್ತಿರುವ ಮಾರ್ಗಗಳು, ಮುಂದೆ ಕೈಗೊಳ್ಳುವ ಕಾರ್ಯಗಳ ಬಗ್ಗೆಯೂ ಶಾಸಕರೊಂದಿಗೆ ಸಮಾಲೋಚಿಸಿ ಎಲ್ಲರೂ ಒಟ್ಟಾಗಿರುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ