ಸರ್ಕಾರ ಉಳಿಸಿಕೊಳ್ಳಲು ಅತೃಪ್ತರ ಮನವೊಲಿಕೆಗೆ ಪ್ರಯತ್ನ-ಯಾರ ಸಂಪರ್ಕಕಕ್ಕೂ ಸಿಗದ ಅತೃಪ್ತರು

ಬೆಂಗಳೂರು, ಜು.20-ರಾಜೀನಾಮೆ ನೀಡಿ ಮುಂಬೈನ ಹೊಟೇಲ್‍ನಲ್ಲಿ ಬೀಡುಬಿಟ್ಟಿರುವ 15 ಮಂದಿ ಅತೃಪ್ತ ಶಾಸಕರ ಮನವೊಲಿಕೆಗೆ ನಡೆಸಿದ ಕೊನೆ ಕ್ಷಣದ ಪ್ರಯತ್ನಗಳು ಫಲ ನೀಡಿದಂತೆ ಕಂಡುಬಂದಿಲ್ಲ.

ಶತಾಯಗತಾಯ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರಧಾನಿ ಎಚ್.ಡಿ.ದೇವೇಗೌಡರು ಕೊನೆ ಕ್ಷಣದ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಹೇಗಾದರೂ ಮಾಡಿ ಅತೃಪ್ತರ ಮನವೊಲಿಸಿ ಅವರನ್ನು ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಸದನಕ್ಕೆ ಕರೆತರುವ ಪ್ರಯತ್ನವನ್ನು ಮಾಡುತ್ತಿದ್ದು, ಅದರ ಅಂಗವಾಗಿ ಅತೃಪ್ತ ಶಾಸಕರ ಆಪ್ತರೊಂದಿಗೆ ಮಾತುಕತೆ ನಡೆಸುವ ಯತ್ನ ನಡೆಸಿದರಾದರೂ ಅವರ್ಯಾರೂ ಸಂಪರ್ಕಕ್ಕೆ ಸಿಗಲಿಲ್ಲ.

ಕಾಂಗ್ರೆಸ್‍ನ ಪ್ರಭಾವಿ ನಾಯಕ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ದೇವೇಗೌಡರು, ಅತೃಪ್ತರೊಂದಿಗೆ ದೂರವಾಣಿ ಮೂಲಕ ಮಾತನಾಡುವ ಪ್ರಯತ್ನ ನಡೆಸಿದರಾದರೂ ಅತೃಪ್ತರು ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.
ರಾಮಲಿಂಗಾರೆಡ್ಡಿ ಅವರ ಪರಮಾಪ್ತರಾದ ಬೆಂಗಳೂರಿನ ಕೆಲ ಶಾಸಕರು ಮುಂಬೈ ರೆಸಾರ್ಟ್‍ನಲ್ಲಿದ್ದು, ಅವರೊಂದಿಗೆ ಚರ್ಚಿಸಿ ಅವರ ಮನವೊಲಿಸಿ ಕರೆತರಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ.

ರಾಮಲಿಂಗಾರೆಡ್ಡಿ ಅವರು ಕೂಡ ರಾಜೀನಾಮೆ ನೀಡಿದ್ದರು.ಆದರೆ ತಮ್ಮ ರಾಜೀನಾಮೆಯನ್ನು ಹಿಂಪಡೆದು ಸದನಕ್ಕೆ ಹಾಜರಾಗಿದ್ದರು. ಇದರಿಂದ ಅತೃಪ್ತ ಶಾಸಕರ ಗುಂಪಿನಲ್ಲಿದ್ದ ಶಾಸಕ ಎಂ.ಟಿ.ಬಿ.ನಾಗರಾಜ್ ಅವರು, ನಾವೆಲ್ಲ ರಾಜೀನಾಮೆ ನೀಡಿ ಒಟ್ಟಿಗೆ ಇರೋಣ ಎಂದು ಹೇಳಿದ್ದ ರಾಮಲಿಂಗಾರೆಡ್ಡಿ ಅವರು ಈಗ ರಾಜೀನಾಮೆ ಹಿಂಪಡೆದು ಮೋಸ ಮಾಡಿದ್ದಾರೆ. ನಾವು ಅವರೊಂದಿಗೆ ಹೋಗುವುದಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ನಿನ್ನೆಯೇ ಖಚಿತಪಡಿಸಿದ್ದರು.

ಸೋಮವಾರ ಅಧಿವೇಶನದಂದು ವಿಶ್ವಾಸಮತಯಾಚನೆ ಪ್ರಕ್ರಿಯೆ ಮುಗಿಸುವುದಾಗಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.ಈ ನಡುವೆ ವಿಪ್ ನೀಡುವ ಬಗ್ಗೆ ಸುಪ್ರೀಂಕೋರ್ಟ್ ಆದೇಶದಲ್ಲಿ ಗೊಂದಲವಿದೆ.ಅದರ ಬಗ್ಗೆ ವಿವರಣೆ ಕೋರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಸುಪ್ರೀಂಕೋರ್ಟ್‍ನ ಮೆಟ್ಟಿಲೇರಿದ್ದಾರೆ.

ವಿಧಾನಸಭೆಯಲ್ಲಿ ವಿಶ್ವಾಸಮತ ಕೋರಿ ಅದರ ಮೇಲೆ ಚರ್ಚೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ರಾಜ್ಯಪಾಲರು ಸಮಯಾವಕಾಶ ನೀಡಿ ಗಡುವು ವಿಧಿಸಿರುವುದರ ಬಗ್ಗೆ ಆಕ್ಷೇಪವೆತ್ತಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲ್ಮನವಿ ಸಲ್ಲಿಸಿದ್ದಾರೆ.
ನಾಳೆ ಅಧಿವೇಶನದಲ್ಲಿ ವಿಶ್ವಾಸಮತ ಒಂದೆಡೆಯಾದರೆ, ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿಗಳ ವಿಚಾರಣೆ ಮತ್ತೊಂದೆಡೆ, ಅತೃಪ್ತ ಶಾಸಕರ ಮನವೊಲಿಸುವ ಕೊನೆ ಪ್ರಯತ್ನಗಳು ಕೂಡ ನಡೆಯುತ್ತಿವೆ.ರಾಜ್ಯದ ರಾಜಕಾರಣ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ