ಬೆಂಗಳೂರು, ಜು.20-ಸಮ್ಮಿಶ್ರ ಸರ್ಕಾರದ ವಿರುದ್ಧ ಆಪರೇಷನ್ ಕಮಲವನ್ನು ಇನ್ನೂ ಮುಂದುವರೆಸಿರುವ ಬಿಜೆಪಿ ಇಂದು ಬೆಳಗ್ಗೆ ಸಚಿವ ರಹೀಮ್ ಖಾನ್ ಅವರಿಗೆ ಕರೆ ಮಾಡಿ ಬಿಜೆಪಿ ಸೇರುವಂತೆ ಆಹ್ವಾನ ನೀಡಿದೆ.
ಬಿಜೆಪಿ ಸಂಸದೆ ಶೋಭಾಕರಂದ್ಲಾಜೆ ಅವರು, ಸಚಿವ ರಹೀಮ್ಖಾನ್ ಅವರಿಗೆ ಕರೆ ಮಾಡಿ ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
30 ಕೋಟಿ ರೂ. ಹಣ ನೀಡುತ್ತೇವೆ, ನಿಮಗೆ ಮಂತ್ರಿ ಸ್ಥಾನ ಕೊಡುತ್ತೇವೆ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕನನ್ನಾಗಿ ಬೆಳೆಸುತ್ತೇವೆ ಎಂಬ ಆಫರ್ ನೀಡಿದ್ದಾರೆ ಎನ್ನಲಾಗಿದೆ.
ಆಪರೇಷನ್ ಕಮಲದ ಭೀತಿಯಿಂದ ಕಾಂಗ್ರೆಸ್ ತನ್ನೆಲ್ಲ ಶಾಸಕರನ್ನು ನಗರದ ತಾಜ್ ವಿವಂತಾ ಹೊಟೇಲ್ನಲ್ಲಿ ಇರಿಸಿದೆ.ಈ ಸಂದರ್ಭದಲ್ಲಿ ಸಚಿವ ರಹೀಮ್ಖಾನ್ಗೆ ಕರೆ ಮಾಡಿ ಬಿಜೆಪಿ ಸೇರುವಂತೆ ಆಹ್ವಾನ ನೀಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರವಾಗುವಂತೆ ಮಾಡಿದೆ.
ಈ ಬೆಳವಣಿಗೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ, ಬಿಜೆಪಿಯವರು ನಮ್ಮ ಶಾಸಕರಿಗೆ ಆಮಿಷವೊಡ್ಡುತ್ತಲೇ ಇದ್ದಾರೆ. ಹೆದರಿಸಿ, ಬೆದರಿಸಿ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಕೆಲವರಿಂದ ರಾಜೀನಾಮೆ ಕೊಡಿಸುವ ಆಪರೇಷನ್ ಕಮಲ ಮುಂದುವರೆದಿದೆ.ನಾವು ಬರುವುದಿಲ್ಲ ಎಂದರೂ ಬಿಡದೆ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು.
ನಮ್ಮ ಶಾಸಕರು ಅಂಜಿಕೆ, ಬೆದರಿಕೆಗಳಿಗೆ ಹೆದರುವುದಿಲ್ಲ. ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಈಗಾಗಲೇ ಬಿಟ್ಟು ಹೋಗಿರುವವರು ವಾಪಸ್ ಬಂದು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಸೂಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಪಾಲರು ಕುದುರೆ ವ್ಯಾಪಾರದ ಬಗ್ಗೆ ಮಾತನಾಡಿದ್ದಾರೆ, ಬಿಜೆಪಿ ನಡೆಸುತ್ತಿರುವ ಆಪರೇಷನ್ ಕಮಲದ ಬಗ್ಗೆ ಅವರು ಏಕೆ ಗಮನಹರಿಸುತ್ತಿಲ್ಲ. ಬಿಜೆಪಿ ರಾಜಭವನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.