ಮೈತ್ರಿ ಸರ್ಕಾರದಿಂದ ಸುಪ್ರೀಂ ಕೋರ್ಟ್​ಗೆ 4 ಅರ್ಜಿಗಳ ಸಲ್ಲಿಕೆ; ರಾಜ್ಯಪಾಲರ ನಿರ್ದೇಶನಕ್ಕೆ ತಡೆ ತರಲು ಪ್ರಯತ್ನ

ಬೆಂಗಳೂರು: ರಾಜ್ಯಪಾಲರು ಮಧ್ಯಾಹ್ನ 1:30ರೊಳಗೆ ವಿಶ್ವಾಸಮತ ಯಾಚನೆ ನಡೆಸಿ ಎಂದು ಮುಖ್ಯಮಂತ್ರಿಗೆ ನಿರ್ದೇಶನ ನೀಡಿದ ಬಳಿಕ ರಾಜ್ಯದ ರಾಜಕೀಯದಲ್ಲಿ ಜಂಘೀ ಕುಸ್ತಿ ಇನ್ನಷ್ಟು ಜೋರಾಗಿದೆ. ಸಾಂವಿಧಾನಿಕ ಬಿಕ್ಕಟ್ಟು ಇನ್ನೂ ಕಗ್ಗಂಟಾಗಿ ಮುಂದುವರಿಯುತ್ತಿದೆ. ಇವತ್ತು ಸುಪ್ರೀಂ ಕೋರ್ಟ್​​ನಲ್ಲಿ ನಾಲ್ಕು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಸ್ಪೀಕರ್ ರಮೇಶ್ ಕುಮಾರ್, ಸಿಎಂ ಕುಮಾರಸ್ವಾಮಿ, ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ವಿಶ್ವಾಸ ಮತ ಯಾಚಿಸುವಂತೆ ರಾಜ್ಯಪಾಲರು ತಂದ ನಿರ್ದೇಶನಕ್ಕೆ ತಡೆ ತರುವುದು ಮೈತ್ರಿಪಾಳಯದ ಪ್ರಮುಖ ಗುರಿಯಾಗಿದೆ.

ಸ್ಪೀಕರ್ ಅರ್ಜಿ:
ನಾಲ್ಕು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಸ್ಪಷ್ಟೀಕರಣ ಕೋರಿ ಸ್ಪೀಕರ್ ಅವರು ಸುಪ್ರೀಂ ಮೆಟ್ಟಿಲೇರುತ್ತಿದ್ದಾರೆ. ವಿಪ್ ವಿಚಾರದಲ್ಲಿ ಗೊಂದಲ ಇದೆ. ಸದನಕ್ಕೆ ಆಗಮಿಸದ ಸದಸ್ಯರಿಗೆ ವಿಪ್ ಅನ್ವಯ ಆಗುತ್ತದೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಕೋರಿಕೊಳ್ಳಬಹುದು. ಸ್ಪೀಕರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸುವ ಸಾಧ್ಯತೆ ಇದೆ.

ಸಿಎಂ ಅರ್ಜಿ:
ರಾಜ್ಯಪಾಲರು ಮಧ್ಯಾಹ್ನದೊಳಗೆ ವಿಶ್ವಾಸ ಮತ ನಡೆಸುವಂತೆ ನಿರ್ದೇಶನ ನೀಡಿದ್ದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುಪ್ರೀಂ ಕೋರ್ಟ್​ಗೆ ಮೊರೆ ಹೋಗಲಿದ್ದಾರೆ. ಗವರ್ನರ್ ನಿರ್ದೇಶನಕ್ಕೆ ತಡೆ ತಂದು ಸದ್ಯಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು ಸಿಎಂ ತಂತ್ರವಾಗಿದೆ. ರಾಜೀವ್ ಧವನ್ ಅವರು ಸಿಎಂ ಪರವಾಗಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ.

ಸಿದ್ದರಾಮಯ್ಯ ಅರ್ಜಿ:
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಅವರು ಅರ್ಜಿ ಸಲ್ಲಿಕೆಯಾಗುತ್ತಿದೆ. ಈ ಹಿಂದಿನ ಸುಪ್ರೀಂ ಕೋರ್ಟ್ ತೀರ್ಪಿಗೆ ಸಂಬಂಧಪಟ್ಟಿದ್ದೇ ಇದಾಗಿದೆ. ಸಿಎಲ್​ಪಿ ನಾಯಕರಿಗೆ ವಿಪ್ ನೀಡುವ ಅಧಿಕಾರದ ವ್ಯಾಪ್ತಿ ಬಗ್ಗೆ ಕೆಲ ಅನುಮಾನಗಳಿಗೆ ಪರಿಹಾರ ಕೊಡುವಂತೆ ಅವರು ಕೋರ್ಟ್​ಗೆ ಮನವಿ ಮಾಡಿಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಪರವಾಗಿ ಕಪಿಲ್ ಸಿಬಲ್ ವಾದ ಮಂಡನೆ ಮಾಡಲಿದ್ದಾರೆ.

ದಿನೇಶ್ ಗುಂಡೂರಾವ್ ಅರ್ಜಿ:
ವಿಶ್ವಾಸ ಮತ ಗೊತ್ತುವಳಿ ಮೇಲೆ ನಿನ್ನೆ ನಡೆದ ಚರ್ಚೆಯ ವೇಳೆ ಆಡಳಿತ ಪಕ್ಷಗಳ ಮೂವರು ಸದಸ್ಯರು ಕ್ರಿಯಾಲೋಪ ವಿಚಾರಗಳನ್ನು ಎತ್ತಿದ್ದರು. ಇದೇ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸುಪ್ರೀಂ ಕೋರ್ಟ್​ನಿಂದ ನಿರ್ದೇಶನ ಕೋರುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ