ಬೆಂಗಳೂರು; ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ನಾನು ಕಲಿಯುವುದು ಏನೂ ಇಲ್ಲ, ಅವರವರ ನಡತೆಗೆ ಅನುಗುಣವಾಗಿ ಅವರು ಮಾತಾಡ್ತಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದ್ದಾರೆ.
ಗುರುವಾರ ಸದನದಲ್ಲಿ ಬಹುಮತ ಸಾಬೀತಿಗೆ ಸ್ಪೀಕರ್ ಅವಕಾಶ ಕೊಡದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ, “ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದ ಏಜೆಂಟ್. ಇದೇ ಕಾರಣಕ್ಕೆ ಅವರು ಹೀಗೆ ಮಾಡುತ್ತಿದ್ದಾರೆ” ಎಂದು ನೇರವಾಗಿ ಆರೋಪ ಮಾಡಿದ್ದರು.
ಆದರೆ, ಶೋಭಾ ಕರಂದ್ಲಾಜೆ ಅವರ ಮಾತಿಗೆ ತಿರುಗೇಟು ನೀಡಿರುವ ಸ್ಪೀಕರ್ ರಮೇಶ್ ಕುಮಾರ್, “ಅವರವರ ನಡತೆಗೆ ಅನುಗುಣವಾಗಿ ಅವರು ಮಾತಾಡ್ತಾರೆ. ಅವರು ಬೆಳೆದುಬಂದ ಹಾದಿ ಅವರ ಮಾತಿಗೆ ಕಾರಣ. ಇನ್ನೂ ನಾನು ಅವರಿಂದ ಕಲಿಯುವುದು ಏನೂ ಇಲ್ಲ. ಅವರಿಗಿಂತ ಉತ್ತಮರು ನನಗೆ ಗೊತ್ತಿದ್ದಾರೆ ನಾನು ಅವರ ಬಳಿಯೇ ಕಲೀತಿನಿ ಹಾಗೂ ಅವರು ಸಂಸದೆ ಎಂಬ ಕಾರಣಕ್ಕೆ ಗೌರವಿಸ್ತೀನಿ” ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಶುಕ್ರವಾರ ಮಧ್ಯಾಹ್ನದ ಒಳಗಾಗಿ ಬಹುಮತ ಸಾಬೀತುಪಡಿಸುವ ರಾಜ್ಯಪಾಲರ ನಿರ್ದೇಶನದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ಮುಂದಾಗದ ಸ್ಪೀಕರ್ ರಮೇಶ್ ಈ ಕುರಿತ ಎಲ್ಲಾ ವಿಚಾರವನ್ನೂ, ಉತ್ತರವನ್ನೂ ಸದನದಲ್ಲೇ ಹೇಳ್ತೀನಿ ಎಂದು ಸ್ಪಷ್ಟಪಡಿಸಿದ್ದಾರೆ.