ಮೈಸೂರು, ಜು.19-ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ವಾಮಮಾರ್ಗ ಹಿಡಿದಿದ್ದಾರೆ. ಬಹುಮತವಿಲ್ಲದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಮೂರನೇ ಆಷಾಢ ಶುಕ್ರವಾರದ ಅಂಗವಾಗಿ ಇಂದು ನಾಡ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೈತ್ರಿ ಸರ್ಕಾರ ಮುಳುಗುತ್ತಿರುವ ಹಡಗು.ಹಾಗಿದ್ದರೂ ಸರ್ಕಾರ ಉಳಿಸಿಕೊಳ್ಳಲು ಉಭಯ ನಾಯಕರು ವಾಮಮಾರ್ಗ ಹಿಡಿದಿದ್ದಾರೆ. ಬಿಜೆಪಿ ಶಾಸಕರನ್ನು ಸೆಳೆಯುವ ಯತ್ನ ನಡೆಸಿದ್ದಾರೆ.ಬಿಜೆಪಿಯ ಯಾವ ಶಾಸಕರೂ ಮೈತ್ರಿಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರು.
ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕಾಗಿ ಬೇಡಿಕೊಂಡಿದ್ದೇವೆ. ನಾನು ಈವರೆಗೂ ಈ ರೀತಿ ದೇವಿಗೆ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ರಾಜ್ಯದಲ್ಲಿ ಒಂದು ವರ್ಷದಿಂದ ಆಡಳಿತ ವ್ಯವಸ್ಥೆ ಕುಸಿದಿದೆ.ಬರದಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ.ಇಂತಹ ಯಾವುದೇ ವಿಚಾರದಲ್ಲೂ ಸರ್ಕಾರ ಗಮನ ಹರಿಸುತ್ತಿಲ್ಲ. ಈ ಸರ್ಕಾರವನ್ನು ತೊಲಗಿಸಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬರಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಈ ಮೊದಲು ಮುಖ್ಯಮಂತ್ರಿ ಕುಮಾರಸ್ವಾಮಿ ಬಹುಮತ ಸಾಬೀತು ಮಾಡುವುದಾಗಿ ಪ್ರಸ್ತಾಪ ಮಾಡಿದ್ದರು.ಆದರೆ ಈಗ ಬಹುಮತ ಸಾಬೀತುಪಡಿಸದೆ ಕಾಲಹರಣ ಮಾಡುತ್ತಿದ್ದಾರೆ.ಆದರೆ ಇನ್ನೂ ಎಷ್ಟು ದಿನ ಈ ನಾಟಕ ಎಂದು ಪ್ರಶ್ನಿಸಿದ ಅವರು, ಸುಪ್ರೀಂಕೋರ್ಟ್‍ಗೆ ಬೆಲೆ ಕೊಡುತ್ತಿಲ್ಲ. ಇತ್ತ ರಾಜ್ಯಪಾಲರಿಗೂ ಗೌರವ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮೆಟ್ಟಿಲು ಹತ್ತಿ ದೇವಿ ದರ್ಶನ:
ಪ್ರತಿಬಾರಿಯಂತೆ ಈ ಬಾರಿಯೂ ಶೋಭಾಕರಂದ್ಲಾಜೆಯವರು ಚಾಮುಂಡೇಶ್ವರಿ ಬೆಟ್ಟಕ್ಕೆ ಬರಿಗಾಲಿನಲ್ಲಿ ಮೆಟ್ಟಿಲು ಹತ್ತುವ ಮೂಲಕ ತೆರಳಿ ದೇವಿ ದರ್ಶನ ಪಡೆದರು.
1001 ಮೆಟ್ಟಿಲುಗಳನ್ನು ಕಾರ್ಯಕರ್ತರೊಂದಿಗೆ ಹತ್ತಿ ಬಂದ ಅವರು, ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.