ಬೆಂಗಳೂರು, ಜು.19-ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಮೈತ್ರಿ ಸರ್ಕಾರದ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದು ಜೆಡಿಎಸ್‍ನಲ್ಲಿ ಆತಂಕವನ್ನು ಇಮ್ಮಡಿಗೊಳಿಸಿದೆ.
ಜೆಡಿಎಸ್-ಕಾಂಗ್ರೆಸ್‍ನ ಶಾಸಕರು ರಾಜೀನಾಮೆ ನೀಡಿರುವುದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ನಡುವೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಇಂದೇ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಸಾಬೀತುಪಡಿಸುವಂತೆ ಮುಖ್ಯಮಂತ್ರಿಗೆ ಸೂಚನೆ ನೀಡಿದ್ದಾರೆ.ಇದು ಜೆಡಿಎಸ್‍ನ ಆತಂಕವನ್ನು ಇನ್ನೂ ಹೆಚ್ಚಿಸಿದೆ.
ರಾಜ್ಯಪಾಲರ ನಿರ್ದೇಶನವನ್ನು ಪಾಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಮುಖ್ಯಮಂತ್ರಿ ವಿಶ್ವಾಸಮತಯಾಚನೆ ನಿರ್ಣಯ ಮಂಡಿಸಿರುವ ಸಂದರ್ಭದಲ್ಲಿ ರಾಜ್ಯಪಾಲರು ನಿರ್ದೇಶನ ನೀಡಿರುವ ಬಗ್ಗೆ ತೀವ್ರ ಅಸಮಾಧಾನವೂ ಮಿತ್ರ ಪಕ್ಷಗಳಲ್ಲಿ ವ್ಯಕ್ತವಾಗಿದೆ.
ರಾಜ್ಯಪಾಲರ ನಿರ್ದೇಶನವನ್ನು ಪಾಲಿಸಲೇಬೇಕೇ, ಒಂದು ವೇಳೆ ಪಾಲಿಸದಿದ್ದರೆ ಮುಂದೇನಾಗಬಹುದು. ಯಾವ ರೀತಿಯ ಎಚ್ಚರಿಕೆ ಹೆಜ್ಜೆ ಇಡಬೇಕು ಎಂಬೆಲ್ಲದರ ಬಗ್ಗೆ ಕಾನೂನು ತಜ್ಞರ ಸಲಹೆಯನ್ನು ಪಡೆದುಕೊಳ್ಳಲಾಗಿದೆ. ಅದರಂತೆ ಜೆಡಿಎಸ್ ನಡೆದುಕೊಳ್ಳಲು ತೀರ್ಮಾನಿಸಿದೆ.
ಬಿಜೆಪಿ ವಿಶ್ವಾಸಮತ ಸಾಬೀತುಪಡಿಸುವಂತೆ ಪಟ್ಟು ಹಿಡಿದು ನಿನ್ನೆಯಿಂದಲೂ ಸದನದಲ್ಲೇ ಕುಳಿತಿದೆ.ಅಹೋರಾತ್ರಿ ಸತ್ಯಾಗ್ರಹವನ್ನು ನಡೆಸುವ ಮೂಲಕ ಒತ್ತಡ ಹೇರುವ ತಂತ್ರವನ್ನು ಅನುಸರಿಸುತ್ತಿದೆ.ರಾಜೀನಾಮೆ ನೀಡಿರುವ ಶಾಸಕರು ಮನವೊಲಿಕೆಗೆ ಮಣಿದಿಲ್ಲ. ಹೀಗಾಗಿ ಮೈತ್ರಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಸರ್ಕಾರ ಉಳಿಸಿಕೊಳ್ಳುವ ಕೊನೆ ಕ್ಷಣದ ಪ್ರಯತ್ನವನ್ನು ಮುಂದುವರೆಸಲಾಗುತ್ತಿದೆ.
ನಿನ್ನೆ ರಾತ್ರಿ ರೆಸಾರ್ಟ್‍ನಲ್ಲಿ ಜೆಡಿಎಸ್ ಶಾಸಕರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಸಕರ ರಾಜೀನಾಮೆಯಿಂದ ಎದುರಾಗಿರುವ ಸಮಸ್ಯೆ, ಸುಪ್ರೀಂಕೋರ್ಟ್ ತೀರ್ಪು, ರಾಜ್ಯಪಾಲರ ನಿರ್ದೇಶನದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ತಾವು ಕೈಗೊಂಡಿರುವ ಕ್ರಮಗಳು ಕಾನೂನು ಹೋರಾಟದ ಬಗ್ಗೆಯೂ ಶಾಸಕರಿಗೆ ಮಾಹಿತಿ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.