ಬೆಂಗಳೂರು: ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ನನ್ನು ಬಂಧಿಸುವಲ್ಲಿ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
2 ಸಾವಿರ ಕೋಟಿ ರೂ. ವಂಚನೆ ಮಾಡಿ ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಮನ್ಸೂರ್ ಖಾನ್ ದೆಹಲಿಯಲ್ಲಿ ಇಡಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ತನಗೆ ಆರೋಗ್ಯ ಸರಿಯಿಲ್ಲದ ಕಾರಣ ವಿಶ್ರಾಂತಿ ಪಡೆಯುತ್ತಿದ್ದೆ ಎಂದು ವಿಡಿಯೋ ಮಾಡಿ ಪೊಲೀಸ್ ಕಮಿಷನರ್ಗೆ ಕಳುಹಿಸಿದ್ದ ಮನ್ಸೂರ್ ಖಾನ್ ಕಳೆದ ಭಾನುವಾರ 24 ಗಂಟೆಗಳಲ್ಲಿ ಬೆಂಗಳೂರಿಗೆ ವಾಪಾಸ್ ಆಗುವುದಾಗಿ ತಿಳಿಸಿದ್ದ. ಆದರೆ, ಆತ ಸುಳ್ಳು ಹೇಳಿದ್ದಾನೆಂದು ಗೊತ್ತಾಗುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ಮತ್ತೆ ಚುರುಕಾಗಿದ್ದರು.
ನಿನ್ನೆ ದೆಹಲಿ ವಿಮಾನ ನಿಲ್ದಾಣಕ್ಕೆ ದುಬೈನಿಂದ ತಡರಾತ್ರಿ ಆಗಮಿಸಿದ ಮನ್ಸೂರ್ ಖಾನ್ನನ್ನು ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ, ಎಸ್ಐಟಿ ಬದಲಿಗೆ ಇಡಿ ವಶಕ್ಕೆ ಮನ್ಸೂರ್ ಖಾನ್ನನ್ನು ನೀಡಲಾಯಿತು. ಸದ್ಯಕ್ಕೆ ಮನ್ಸೂರ್ ಖಾನ್ ದೆಹಲಿ ಇ.ಡಿ ಅಧಿಕಾರಿಗಳ ಸುಪರ್ದಿಯಲ್ಲಿದ್ದಾನೆ. ಸಂಜೆ ವೇಳೆಗೆ ಮನ್ಸೂರ್ ಖಾನ್ನನ್ನು ಬೆಂಗಳೂರು ಇಡಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿ ವಿಚಾರಣೆ ನಡೆಸಲಿದ್ದಾರೆ.
ದೆಹಲಿಗೆ ಬರುತ್ತಿದ್ದಂತೆ ವಶಕ್ಕೆ ಪಡೆಯಲು ಯೋಚಿಸಿದ್ದ ಎಸ್ಐಟಿಗೂ ಮುನ್ನವೇ ಇಡಿ ಅಧಿಕಾರಿಗಳು ಮನ್ಸೂರ್ನನ್ನು ವಶಕ್ಕೆ ಪಡೆದಿದ್ದಾರೆ. ಮನ್ಸೂರ್ ಭಾರತಕ್ಕೆ ಬರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಎಸ್ಐಟಿಯ ಒಂದು ತಂಡ ದೆಹಲಿ ಏರ್ಪೋರ್ಟ್ ನಲ್ಲಿ ಬೀಡು ಬಿಟ್ಟಿದ್ದರು. ಆದರೆ, ಏರ್ಪೋರ್ಟ್ನಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಎಸ್ಐಟಿ ಬದಲಿಗೆ ಕೇಂದ್ರ ತನಿಖಾ ಸಂಸ್ಥೆ ಇಡಿ ವಶಕ್ಕೆ ಮನ್ಸೂರ್ ಖಾನ್ನನ್ನು ನೀಡಿದರು. ಮನ್ಸೂರ್ ಖಾನ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ನೀಡಲಾಗಿತ್ತು. ಇದುವರೆಗೂ 40 ಸಾವಿರಕ್ಕೂ ಹೆಚ್ಚು ದೂರುಗಳು ಮನ್ಸೂರ್ ಖಾನ್ ವಿರುದ್ಧ ದಾಖಲಾಗಿವೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಮಹಮ್ಮದ್ ಮನ್ಸೂರ್ಗಾಗಿ ಎಸ್ಐಟಿ ಮತ್ತು ಇಡಿ ತಂಡ ಶೋಧ ನಡೆಸಿತ್ತು. ಮನ್ಸೂರ್ ಖಾನ್ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಶಿವಾಜಿನಗರ ಶಾಸಕ ರೋಷನ್ ಬೇಗ್ ಹೆಸರನ್ನೂ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ 3 ದಿನಗಳ ಹಿಂದೆ ರೋಷನ್ ಬೇಗ್ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದ ಎಸ್ಐಟಿ ತಂಡ ವಿಚಾರಣೆ ನಡೆಸಿತ್ತು.