ನೆಮ್ಮದಿ ಕೆಡಿಸಿರುವ ರಾಜಕೀಯ ಬೆಳವಣಿಗೆಗಳಿಗೆ ಇಂದು ತಾರ್ಕಿಕ ಅಂತ್ಯ?

ಬೆಂಗಳೂರು, ಜು.19-ಕಳೆದ 15 ದಿನಗಳಿಂದ ರಾಜ್ಯದ ನೆಮ್ಮದಿ ಕೆಡಿಸಿರುವ ರಾಜಕೀಯ ಬೆಳವಣಿಗೆಗಳಿಗೆ ಇಂದು ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಗೆ ಮುಂದಾಗಿದ್ದಾರೆ. ರಾಜ್ಯಪಾಲ ವಜೂಭಾಯಿ ವಾಲಾ ಅವರು ನಿನ್ನೆ ಸಂಜೆ ಸ್ಪೀಕರ್ ರಮೇಶ್‍ಕುಮಾರ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ತಮಗೆ 15 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ 1.30ರೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಲಾಪದ ಆರಂಭದಲ್ಲೇ ಸ್ಪೀಕರ್ ರಮೇಶ್‍ಕುಮಾರ್ ಅವರು ಬೇರೆ ಯಾವುದೇ ಕಲಾಪಕ್ಕೆ ಅವಕಾಶ ಮಾಡಿಕೊಡದಂತೆ ವಿಶ್ವಾಸಮತ ಯಾಚನೆ ಮೇಲಿನ ಚರ್ಚೆ, ಉತ್ತರ, ಮತದಾನಕ್ಕೆ ಮಾತ್ರ ಇಂದಿನ ಅಧಿವೇಶನ ಸೀಮಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಈ ಮಧ್ಯೆ ಸಚಿವ ಡಿ.ಕೆ.ಶಿವಕುಮಾರ್ ಅವರು ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಅವಕಾಶ ಕೋರಿದರಾದರೂ ಸಭಾಧ್ಯಕ್ಷರು ನಿಷ್ಠೂರವಾಗಿ ಅದನ್ನು ನಿರಾಕರಿಸಿದರು.ಹೀಗಾಗಿ ಕೊನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ರಾಜಕೀಯ ಜೀವನದ ಆರಂಭದಿಂದಲೂ ನಡೆದು ಬಂದ ಬೆಳವಣಿಗೆಗಳು, ಇತ್ತೀಚಿನ ಚುನಾವಣೆ ಫಲಿತಾಂಶ, ಆನಂತರ ನಡೆದ ರಾಜಕೀಯ ಚದುರಂಗದಾಟ, ತಮ್ಮ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸುದೀರ್ಘ ವಿವರಣೆ ನೀಡಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ಸದ್ದು ಮಾಡದೆ ಅತ್ಯಂತ ನಿಶ್ಯಬ್ಧ ಹಾಗೂ ಶಿಸ್ತಿನಿಂದ ಕುಳಿತಿದ್ದರು.ದಿನಪೂರ್ತಿ ಕಲಾಪ ಇದೇ ರೀತಿ ನಡೆಯುತ್ತದೋ, ಇಲ್ಲವೋ ಎಂಬ ಗೊಂದಲಗಳು ಬಿಜೆಪಿ ಸದಸ್ಯರನ್ನು ಕಾಡುವಂತೆ ಕಲಾಪ ಅಚ್ಚುಕಟ್ಟಾಗಿ ನಡೆಯಿತು.
ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಶ್ವಾಸಮತಯಾಚನೆಗೆ ಪ್ರಾರಂಭಿಸಿದರಾದರೂ 15 ನಿಮಿಷಗಳ ಅಂತರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಧ್ಯಪ್ರವೇಶ ಮಾಡಿ ಪಾಯಿಂಟ್ ಆಫ್ ಆರ್ಡರ್ ಎತ್ತಿದ್ದು, ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ವಿಪ್ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ಶಾಸಕಾಂಗ ಪಕ್ಷದ ನಾಯಕನಾದ ನನ್ನ ಹಕ್ಕುಚ್ಯುತಿಯಾಗಿದೆ ಎಂದು ಹೇಳಿದರು.
ಈ ವಿಷಯ ನಿನ್ನೆ ಇಡೀ ದಿನ ಚರ್ಚೆಯಾಗಿತ್ತು. ವಿಶ್ವಾಸಮತಯಾಚನೆಯ ಕಲಾಪ ಅರ್ಧಕ್ಕೆ ಮೊಟಕುಗೊಂಡಿತ್ತು.ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ರಾಜ್ಯಪಾಲರು ಪತ್ರ ಬರೆದು ಸ್ಪಷ್ಟ ಸೂಚನೆ ನೀಡಿದ್ದರು.

ಇಂದು ಬೆಳಗ್ಗೆ ಕೂಡ ರಾಜ್ಯಪಾಲರ ಆದೇಶದ ಮೇಲೆ ಚರ್ಚೆ ಆರಂಭವಾಗಲಿದೆ, ಸಾಕಷ್ಟು ಗೊಂದಲಗಳು ಸೃಷ್ಟಿಯಾಗಲಿವೆ ಎಂಬ ನಿರೀಕ್ಷೆಗಳು ಹುಸಿಯಾದವು.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸ್ವಲ್ಪ ಭಾವನಾತ್ಮಕವಾಗಿ ವಿಧಾನಸಭೆಯಲ್ಲಿ ಮಾತನಾಡಿದರು.
ಶಾಸಕರ ಬಲಾಬಲ : ವಿಧಾನಸಭೆಯಲ್ಲಿ 224 ಶಾಸಕರ ಸಂಖ್ಯಾಬಲದ ಪೈಕಿ ಬಿಜೆಪಿ 105, ಕಾಂಗ್ರೆಸ್ 78, ಜೆಡಿಎಸ್ 37, ಬಿಎಸ್‍ಪಿ 1, ಪಕ್ಷೇತರರು 2 ಹಾಗೂ ಸ್ಪೀಕರ್ ಅವರುಗಳಿದ್ದು, ಇದರಲ್ಲಿ ಕಾಂಗ್ರೆಸ್‍ನ 12 ಮಂದಿ ರಾಜೀನಾಮೆ ನೀಡಿರುವುದರಿಂದ ಕಾಂಗ್ರೆಸ್ ಬಲ 66ಕ್ಕೆ ಇಳಿದಿದೆ. ಜೆಡಿಎಸ್ ಮೂವರು ರಾಜೀನಾಮೆ ನೀಡಿದ್ದು, ಸಂಖ್ಯಾಬಲ 34ಕ್ಕೆ ಇಳಿದಿದೆ.ರಾಜೀನಾಮೆ ನೀಡಿರುವವರ ಪೈಕಿ ರಾಮಲಿಂಗಾರೆಡ್ಡಿ ಅವರು ತಮ್ಮ ನಿರ್ಧಾರ ಹಿಂಪಡೆದಿದ್ದಾರೆ.

ರಾಜೀನಾಮೆ ನೀಡಿರುವ ಆನಂದ್‍ಸಿಂಗ್, ರಮೇಶ್‍ಜಾರಕಿ ಹೊಳಿ, ಮಹೇಶ್ ಕುಮಟಳ್ಳಿ, ಪ್ರತಾಪ್‍ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇರ್, ಭೆರತಿ ಬಸವರಾಜ್, ಮುನಿರತ್ನ, ಎಂ.ಟಿ.ಬಿ.ನಾಗರಾಜ್, ಸುಧಾಕರ್, ಐಎಂಎ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ರೋಷನ್‍ಬೇಗ್ ಸದನಕ್ಕೆ ಗೈರು ಹಾಜರಾಗಿದ್ದಾರೆ.

ಜೊತೆಗೆ ನಾಗೇಂದ್ರ ಮತ್ತು ಶ್ರೀಮಂತಪಾಟೀಲ್ ಅವರು ಅನಾರೋಗ್ಯದ ಕಾರಣವೊಡ್ಡಿ ಸದನದಿಂದ ಹೊರಗುಳಿದಿದ್ದಾರೆ. ಆರಂಭದಲ್ಲಿ ಶಾಸಕಿ ಸೌಮ್ಯರೆಡ್ಡಿ ಕೂಡ ಸದನಕ್ಕೆ ಬಂದಿರಲಿಲ್ಲ. ಹೀಗಾಗಿ 66 ಸಂಖ್ಯಾಬಲದ ಕಾಂಗ್ರೆಸ್‍ನಲ್ಲಿ 64 ಮಂದಿ ಮಾತ್ರ ಕಲಾಪದಲ್ಲಿ ಹಾಜರಿದ್ದರು.

ಜೆಡಿಎಸ್‍ನಲ್ಲಿ ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ ಅವರ ರಾಜೀನಾಮೆಯಿಂದ ಜೆಡಿಎಸ್‍ನ ಸಂಖ್ಯಾಬಲ 34ಕ್ಕೆ ಇಳಿದಿದೆ.ಒಟ್ಟಾರೆ ಜೆಡಿಎಸ್-ಕಾಂಗ್ರೆಸ್‍ನ ದೋಸ್ತಿ ಪಕ್ಷಗಳು ತಮ್ಮ 98 ಮಂದಿ ಶಾಸಕರನ್ನು ಹೊಂದಿದೆ.ಬಿಜೆಪಿ 105 ಶಾಸಕರನ್ನು ಹೊಂದಿದೆ.ಇನ್ನು ಬಿಎಸ್‍ಪಿ ಮಹೇಶ್, ಪಕ್ಷೇತರರಾದ ನಾಗೇಶ್ ಮತ್ತು ಶಂಕರ್ ಕೂಡ ಆರಂಭದಲ್ಲಿ ಸದನಕ್ಕೆ ಹಾಜರಾಗಿರಲಿಲ್ಲ.
ಕೊನೆಗೆ ಮತದಾನದ ವೇಳೆ ಎಷ್ಟು ಮಂದಿ ಬರುತ್ತಾರೆ, ಸರ್ಕಾರಕ್ಕೆ ಎಷ್ಟು ಮತಗಳು ಚಲಾವಣೆಯಾಗಲಿವೆ ಎಂಬ ಕುತೂಹಲ ಇದೆ.ಇದರ ನಡುವೆ ಕಲಾಪವನ್ನು ಮತ್ತಷ್ಟು ಮುಂದೂಡುವ ಪ್ರಯತ್ನಗಳ ಕುರಿತು ಚರ್ಚೆಗಳು ನಡೆದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ