
ಬೆಂಗಳೂರು, ಜು.19-ಬಹುಮತ ಸಾಬೀತುಪಡಿಸುವಂತೆ ಆದೇಶಿಸುವ ಅಧಿಕಾರ ರಾಜ್ಯಪಾಲರಿಗಿದೆ.ಆದರೆ ನಿರ್ದಿಷ್ಟ ಸಮಯವನ್ನು ಸೂಚಿಸುವ ಅಧಿಕಾರ ಇಲ್ಲ ಎಂಬ ಆಕ್ಷೇಪ ವಿಧಾನಸಭೆಯಲ್ಲಿ ಕೇಳಿ ಬಂತು.
ವಿಶ್ವಾಸ ಮತ ನಿರ್ಣಯದ ಮೇಲೆ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ನಾನೇ ಸ್ವಯಂಪ್ರೇರಿತನಾಗಿ ಇಲ್ಲಿ ವಿಶ್ವಾಸಮತಯಾಚನೆಗೆ ಮುಂದಾಗಿದ್ದೇನೆ. ನಿನ್ನೆ ಸಂಜೆ 8 ಗಂಟೆ ಸುಮಾರಿಗೆ ರಾಜಭವನದಿಂದ ರಾಜ್ಯಪಾಲರು ನನಗೆ ಪತ್ರ ರವಾನೆ ಮಾಡಿ ಶುಕ್ರವಾರ 1.30ರೊಳಗೆ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಇತ್ತೀಚಿನ ಅರುಣಾಚಲ ಪ್ರದೇಶದ ವಿಧಾನಸಭೆಯ ಪ್ರಕರಣ ಕುರಿತಂತೆ ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ರಾಜ್ಯಪಾಲರ ಹಸ್ತಕ್ಷೇಪದ ಬಗ್ಗೆ ಸ್ಪಷ್ಟ ಸೂಚನೆಗಳಿವೆ ಎಂದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಸಚಿವ ಕೃಷ್ಣಭೆರೇಗೌಡ ಅವರು ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಬಹುಮತ ಸಾಬೀತುಪಡಿಸುವಂತೆ ಆದೇಶ ನೀಡಬಹುದು. ಅದಕ್ಕೆ ಒಂದು ವಾರ ಕಾಲಮಿತಿ ನಿಗದಿ ಮಾಡಬಹುದು.ಆದರೆ ಇಂದಿನ ಪರಿಸ್ಥಿತಿಯೇ ಬೇರೆ ಇದೆ.ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚನೆ ನೀಡಿಲ್ಲ. ಮುಖ್ಯಮಂತ್ರಿಯವರೇ ವಿಶ್ವಾಸಮತ ಯಾಚಿಸುವ ನಿರ್ಣಯ ಮಂಡಿಸಿದ್ದಾರೆ.ಅದಕ್ಕೆ ನೀವು ಅವಕಾಶ ನೀಡಿದ್ದೀರಿ.ಇದರ ಮೇಲೆ ಚರ್ಚೆಯೂ ಆರಂಭವಾಗಿದೆ.ಹೀಗಾಗಿ ರಾಜ್ಯಪಾಲರು ಸಮಯ ನಿಗದಿ ಮಾಡಿ ಸೂಚನೆ ನೀಡುವಂತಿಲ್ಲ ಎಂದರು.
ನಮ್ಮ ಸಂವಿಧಾನ ಮುಖ್ಯಮಂತ್ರಿ, ರಾಜ್ಯಪಾಲರು, ಸಭಾಧ್ಯಕ್ಷರು ಸೇರಿದಂತೆ ಯಾರಿಗೂ ಸರ್ವಾಧಿಕಾರಿಯಂತೆ ವರ್ತಿಸುವ ಅವಕಾಶ ನೀಡಿಲ್ಲ. ವಿಶ್ವಾಸಮತ ಯಾಚನೆ ವೇಳೆ ಮಾತನಾಡಲು 20 ಜನ ಸದಸ್ಯರು ಹೆಸರು ಕೊಟ್ಟಿದ್ದಾರೆ. ಅವರ ಚರ್ಚೆಯ ಅಧಿಕಾರವನ್ನು ಮೊಟಕುಗೊಳಿಸಿ ನಿರ್ಣಯ ಮಂಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.