ಬೆಂಗಳೂರು, ಜು.19- ಬಹುಮತ ಸಾಬೀತುಪಡಿಸಬೇಕೆಂದು ಆಗ್ರಹಿಸಿ ವಿಧಾನಸಭೆಯಲ್ಲಿ ಅಹೋರಾತ್ರಿ ಹೋರಾಟ ನಡೆಸುತ್ತಿರುವ ಪ್ರತಿಪಕ್ಷ ಬಿಜೆಪಿ ಸದಸ್ಯರನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬೆಳಗ್ಗೆ ಯೋಗಕ್ಷೇಮ ವಿಚಾರಿಸಿದರು.
ವಿಧಾನಸಭೆಯ ಸ್ಪೀಕರ್ ರಮೇಶ್ಕುಮಾರ್ ಅವರ ಸೂಚನೆ ಮೇರೆಗೆ ವಿಧಾನಸಭೆಗೆ ಆಗಮಿಸಿದ ಪರಮೇಶ್ವರ್ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಎಲ್ಲ ಶಾಸಕರ ಉಭಯ ಕುಶೋಲಪರಿ ವಿಚಾರಿಸಿ ಅವರೊಂದಿಗೇ ಬೆಳಗಿನ ಲಘು ಉಪಾಹಾರ ಸೇವಿಸಿದರು.
ಈ ವೇಳೆ ಪರಮೇಶ್ವರ್ ರಾತ್ರಿ ನಿದ್ದೆ ಮಾಡಿದ್ರಾ, ಇಲ್ಲವೆ ಜಾಗರಣೆ ಮಾಡಿದ್ರಾ, ಸೊಳ್ಳೆ ಕಡಿದವಾ, ಆರೋಗ್ಯ ಹೇಗಿದೆ? ಎಂದು ಯೋಗಕ್ಷೇಮ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸದನದ ಒಳಗಿನ ವರ್ತನೆಗಳೇ ಬೇರೆ, ಸದನದ ಹೊರಗಿನ ನಡವಳಿಕೆಗಳೇ ಬೇರೆ.ಬಿಜೆಪಿಯಲ್ಲೂ ತಮಗೆ ಒಳ್ಳೆಯ ಸ್ನೇಹಿತರಿದ್ದಾರೆ.ರಾತ್ರಿ ವಿಧಾನಸಭೆಯಲ್ಲೇ ಬಿಜೆಪಿ ಶಾಸಕರು ಮಲಗಿದ್ದರು. ಹೀಗಾಗಿ ಅವರ ಆರೋಗ್ಯ ವಿಚಾರಿಸುವುದು ನಮ್ಮ ಕರ್ತವ್ಯ ಎಂದರು.
ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಬಿಜೆಪಿ ಶಾಸಕರಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಹೋರಾತ್ರಿ ಸತ್ಯಾಗ್ರಹ ನಡೆಸಿದ ಬಿಜೆಪಿ ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಾತ್ರಿ ವಿಧಾನಸಭೆಯಲ್ಲೇ ಉಳಿದಿದ್ದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ಶಾಸಕರ ಮನವೊಲಿಸುವ ಪ್ರಯತ್ನವನ್ನು ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಅವರು ಮಾಡಿದರು. ಆದರೂ ಪಟ್ಟು ಬಿಡದೆ ಶಾಸಕರು ವಿಧಾನಸಭೆಯಲ್ಲೇ ಉಳಿದಿದ್ದರು.