![congre](http://kannada.vartamitra.com/wp-content/uploads/2019/07/congre-648x381.jpg)
ಮುಂಬೈ,ಜು.19- ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಕೊನೇ ಕ್ಷಣದವರೆಗೂ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್- ಜೆಡಿಎಸ್ ಮುಖಂಡರು ಕೊನೆಗೂ ಅತೃಪ್ತ ಶಾಸಕರನ್ನು ಸಂಪರ್ಕಿಸಿ ಅವರ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ.
ಅತೃಪ್ತರ ಹಠ ಕಂಡು ದೋಸ್ತಿ ನಾಯಕರು ದಿಕ್ಕು ಕಾಣದಂತಾಗಿದ್ದಾರೆ.ಪಕ್ಷದ ಹಿರಿಯ ನಾಯಕರ ಮನವೊಲಿಕೆಗೂ ಜಗ್ಗದ ಅತೃಪ್ತರ ಮೇಲೆ ವಿಪ್ ಅಸ್ತ್ರ ಪ್ರಯೋಗಿಸಲು ದೋಸ್ತಿಗಳು ಮುಂದಾಗಿದ್ದರೂ ಅತೃಪ್ತರು ಮಾತ್ರ ಡೋಂಟ್ ಕೇರ್ ಅಂತಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸಚಿವ ಡಿ.ಕೆ. ಶಿವಕುಮಾರ್, ಅತೃಪ್ತ ಶಾಸಕರನ್ನು ಸಂಪರ್ಕಿಸಲು ಇಂದೂ ಕೂಡ ಪ್ರಯತ್ನಿಸಿದ್ದು, ಅತೃಪ್ತ ಶಾಸಕರು ಇದಕ್ಕೆ ಸ್ಪಂದಿಸಲಿಲ್ಲ ಎಂದು ಹೇಳಲಾಗಿದೆ.
ಕಲಾಪಕ್ಕೆ ಅತೃಪ್ತ ಶಾಸಕರು ಬರುವುದಿಲ್ಲ. ತಮ್ಮ ಮನವೊಲಿಕೆ ಪ್ರಯತ್ನಕ್ಕೆ ಅವರು ಕ್ಯಾರೇ ಎನ್ನುತ್ತಿಲ್ಲವಾದ್ದರಿಂದ ದೋಸ್ತಿ ಸರ್ಕಾರದ ಮುಖಂಡರು ಹತಾಶರಾಗಿ, ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ಕೈಬಿಟ್ಟಿದ್ದು, ವಿಶ್ವಾಸಮತ ಯಾಚನೆಗೆ ಎಷ್ಟು ಸಾಧ್ಯವೋ ಅಷ್ಟು ವಿಳಂಬ ಮಾಡಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಸದನದಲ್ಲಿ ಕಾಲ ವಿಳಂಬ, ಕಾನೂನು ಕಗ್ಗಂಟ್ಟಿನ ಆಟಕ್ಕೆ ಅತೃಪ್ತರು ಬಗ್ಗುತ್ತಾರೆ ಎಂಬ ದೋಸ್ತಿಗಳ ತಂತ್ರ ಮಕಾಡೆ ಮಲಗಿದೆ.ಎಷ್ಟೇ ಕಾನೂನು ಕಗ್ಗಂಟ್ಟಿಗೆ ಯತ್ನಿಸಿದರೂ ನಮ್ಮ ನಿರ್ಧಾರ ಅಚಲ, ನಮ್ಮ ಒಗಟ್ಟು ಹೀಗೆ ಇರುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರೆಬೆಲ್ ಶಾಸಕರು ರವಾನಿಸಿದ್ದಾರೆ.
ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ. ನಮ್ಮ ಗುರಿ, ನಿರ್ಧಾರ ಸ್ಪಷ್ಟವಿದೆ ಎಂಬ ಅತೃಪ್ತರ ಸಂದೇಶದಿಂದ ದೋಸ್ತಿಗಳು ಕಂಗಾಲಾಗಿದ್ದಾರೆ.ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಾಸ್ ಪಡೆದಿರುವುದಕ್ಕೂ ನಮಗೂ ಸಂಬಂಧ ಇಲ್ಲ. ಅವರ ದಾರಿಗೆ ನಾವು ಬರಲ್ಲ, ಅವರನ್ನು ನಾವು ಫಾಲೋ ಮಾಡಲ್ಲ ಎಂದು ಅತೃಪ್ತ ಶಾಸಕರು ಧೃಢ ನಿರ್ಧಾರ ಮಾಡಿದ್ದಾರೆ.ಇದರಿಂದ ರಾಮಲಿಂಗಾ ರೆಡ್ಡಿ ಪುನರ್ ಆಗಮನ ಅತೃಪ್ತರ ಒಗ್ಗಟ್ಟು ಮುರಿಯೋಕೆ ಅಸ್ತ್ರ ಎಂಬ ದೋಸ್ತಿಗಳ ಲೆಕ್ಕಚಾರ ಸಂಪೂರ್ಣ ಉಲ್ಟಾ ಆಗಿದೆ.
ಸಂಧಾನಕ್ಕೂ ಮಣಿಯುತ್ತಿಲ್ಲ, ರಾಮಲಿಂಗಾರೆಡ್ಡಿ ಯೂಟರ್ನ್ಗೂ ಅತೃಪ್ತರು ಬದಲಾಗುತ್ತಿಲ್ಲ. ಇತ್ತ ವಿಪ್ ಅಸ್ತ್ರಕ್ಕೂ ಹೆದರುತ್ತಿಲ್ಲ. ಈ ರೆಬೆಲ್ ಶಾಸಕರ ಒಗ್ಗಟ್ಟು ಸಮಿಶ್ರ ಸರ್ಕಾರದ ಹಡಗನ್ನು ಮುಳುಗಿಸುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪುಣೆ ರೆಸಾರ್ಟ್ನಲ್ಲಿ ಅತೃಪ್ತರ ಠಿಕಾಣಿ:
ಅತೃಪ್ತ ಶಾಸಕರು ತಾವು ಉಳಿದುಕೊಂಡಿದ್ದ ಮುಂಬೈನ ರೆನೈಸಾನ್ಸ್ ಹೋಟೆಲ್ನಿಂದ ಗುರುವಾರ ದಿಢೀರ್ ನಾಪತ್ತೆಯಾಗಿ ಅಜ್ಞಾತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರು.ಅವರೆಲ್ಲರೂ ಪುಣೆಯ ರೆಸಾರ್ಟ್ ಒಂದನ್ನು ಸೇರಿಕೊಂಡಿರುವ ಮಾಹಿತಿ ಇದ್ದು, ಅಲ್ಲಿಂದಲೇ ರಾಜ್ಯದಲ್ಲಿನ ಆಗುಹೋಗುಗಳನ್ನು ಗಮನಿಸುತ್ತಿದ್ದಾರೆ ಎನ್ನಲಾಗಿದೆ.