ಬೆಂಗಳೂರು,ಜು.19- ಮೈತ್ರಿ ಸರ್ಕಾರದ ನಾಯಕರು ಬಿಜೆಪಿ ಸದಸ್ಯರನ್ನು ಪ್ರಚೋದಿಸಿ ಸದನದಲ್ಲಿ ವಿನಾಕಾರಣ ಗದ್ದಲ ಸೃಷ್ಟಿಸುವ ಸಾಧ್ಯತೆ ಇದ್ದು ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ನೀಡಬಾರದು ಎಂದು ಶಾಸಕರಿಗೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ವಿಧಾನಸೌಧದ ಪ್ರತಿಪಕ್ಷ ನಾಯಕರ ಕೊಠಡಿಯಲ್ಲಿ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಭೆ ನಡೆದಿದ್ದು, ಸದನದಲ್ಲಿ ಇಂದಿನ ಕಾರ್ಯಕಲಾಪಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ತಮ್ಮ ಶಾಸಕರಿಗೆ ತಾಳ್ಮೆ ಕಳೆದುಕೊಳ್ಳದಂತೆ ಯಡಿಯೂರಪ್ಪನವರು ಸಭೆಗೆ ತಿಳಿಸಿದರಲ್ಲದೆ, ಆಡಳಿತ ಪಕ್ಷದ ಸದಸ್ಯರು ಪ್ರಚೋದನೆ ಮಾಡುತ್ತಾರೆ, ನೀವು ಯಾವುದಕ್ಕೂ ಪ್ರತಿಕ್ರಿಯಿಸಬೇಡಿ ಎಂದು ಸೂಚನೆ ನೀಡಿದ್ದಾರೆ.
ರಾಜ್ಯಪಾಲರ ಸೂಚನೆ ಮೇರೆಗೆ ಇಂದೇ ವಿಶ್ವಾಸ ಮತಯಾಚನೆ ನಡೆಸುವ ಸಾಧ್ಯತೆ ಇರುವುದರಿಂದ ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದಂತೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ನಮ್ಮ ವಕೀಲರು ಕೂಡ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.ಕಾಂಗ್ರೆಸ್-ಜೆಡಿಎಸ್ನ ತಂತ್ರಗಾರಿಕೆಗೆ ನಮ್ಮವರು ಸಿದ್ಧರಿದ್ದಾರೆ.ಆ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬೇಡ.ಸಭಾಧ್ಯಕ್ಷ ರಮೇಶ್ಕುಮಾರ್ ಅವರು ರಾಜ್ಯಪಾಲರ ನಿರ್ದೇಶನದಂತೆ ಮತಕ್ಕೆ ಹಾಕಿದರೆ ಎಲ್ಲರೂ ಜಾಗರೂಕತೆಯಿಂದ ಇರಬೇಕು.
ಮತಕ್ಕೆ ಹಾಕುವ ಸಂದರ್ಭದಲ್ಲಿ ಯಾರೂ ಕೂಡ ಸದನದ ಹೊರಗೆ ಹೋಗಬಾರದು ಮತಕ್ಕೆ ಹಾಕುವ ಮೊದಲೇ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಿ, ಬೆಲ್ ಆಗುವ ಮೊದಲೇ ತಮ್ಮ ತಮ್ಮ ಆಸನಗಳಲ್ಲಿ ಕುಳಿತುಕೊಳ್ಳಿ ಎಂದು ಬಿಎಸ್ವೈ ತನ್ನ ಶಾಸಕರಿಗೆ ಸೂಚಿಸಿದ್ದಾರೆ.