ಬೆಂಗಳೂರು,ಜು.18- ಕಡೇ ಕ್ಷಣದಲ್ಲಿ ದೋಸ್ತಿ ಸರ್ಕಾರಕ್ಕೆ ಕೈ ಕೊಟ್ಟು ಮುಂಬೈ ಸೇರಿದ್ದ ಪಕ್ಷೇತರ ಶಾಸಕ ನಾಗೇಶ್ ಕಳೆದ ರಾತ್ರಿ ನಗರಕ್ಕೆ ಆಗಮಿಸಿದ್ದಾರೆ.
ಮುಂಬೈನಿಂದ ವಿಶೇಷ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಜೆಪಿ ಮುಖಂಡ ಆರ್. ಅಶೋಕ್ ಅವರೊಂದಿಗೆ ಆಗಮಿಸಿದ ನಾಗೇಶ್ ನೇರವಾಗಿ ಅವರದೇ ಜಾಲಹಳ್ಳಿಯ ನಿವಾಸಕ್ಕೆ ತೆರಳಿದರು.
ಅಶೋಕ್ ಕಾರಿನಲ್ಲೇ ನಾಗೇಶ್ ಅವರನ್ನು ಕರೆದೊಯ್ಯಲಾಗಿದ್ದು, ಐದು ವಾಹನಗಳಲ್ಲಿ ಬಿಜೆಪಿ ಕಾರ್ಯಕರ್ತರು ಅವರಿಗೆ ಬೆಂಗಾವಲು ಒದಗಿಸಿದ್ದರು ಎಂದು ತಿಳಿದುಬಂದಿದೆ.
ವಿಶ್ವಾಸಮತ ಯಾಚನೆಯಲ್ಲಿ ಒಂದೊಂದು ಮತವು ನಿರ್ಣಾಯಕ ಪಾತ್ರ ವಹಿಸುತ್ತಿರುವುದರಿಂದ ನಾಗೇಶ್ ಬಿಜೆಪಿಗೆ ಬೆಂಬಲ ನೀಡುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿದ್ದರು.
ಕಡೆ ಕ್ಷಣದಲ್ಲಿ ಕಾಂಗ್ರೆಸ್ ಅವರನ್ನು ಹೈಜಾಕ್ ಮಾಡಬಹುದೆಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಯಾರ ಕೈಗೂ ಸಿಗದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿದೆ.
ಒಂದು ವೇಳೆ ಅವರಿಗೆ ಬೆದರಿಕೆ ಕರೆ ಬಂದರೆ ರಾಜ್ಯಪಾಲರಿಗೆ ದೂರು ನೀಡಿ ಭದ್ರತೆ ಒದಗಿಸುವಂತೆ ಬೆಂಗಳೂರುನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡುವಂತೆಯೂ ಮನವಿ ಮಾಡಲು ಬಿಜೆಪಿ ಸಜ್ಜಾಗಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ನಾಗೇಶ್ ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತಾವು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು.
ಸದ್ಯ ವಿಧಾನಸಭೆಯಲಿ ಆರ್.ಶಂಕರ್ ಮತ್ತು ನಾಗೇಶ್ ಪಕ್ಷೇತರ ಶಾಸಕರಾಗಿರುವುದರಿಂದ ಈ ಇಬ್ಬರಿಗೂ ದೋಸ್ತಿ ಪಕ್ಷಗಳು ಹಾಗೂ ಬಿಜೆಪಿಯಿಂದ ಭಾರೀ ಬೇಡಿಕೆ ಬಂದಿದೆ.
ಇನ್ನೊಂದೆಡೆ ಆರ್.ಶಂಕರ್ ಕೂಡ ಮುಂಬೈನಲ್ಲೇ ಬೀಡುಬಿಟ್ಟಿದ್ದು ಯಾವುದೇ ಕ್ಷಣ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.