ಬೆಂಗಳೂರು, ಜು.18-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಮಂಡಿಸುವ ವೇಳೆ ಸುಮಾರು 20ಕ್ಕೂ ಹೆಚ್ಚು ಶಾಸಕರು ಸದನದಲ್ಲಿ ಗೈರು ಹಾಜರಾಗಿದ್ದುದು ಎದ್ದು ಕಾಣುತ್ತಿತ್ತು.
ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್-ಜೆಡಿಎಸ್ನ 15 ಮಂದಿ ಶಾಸಕರು ಹಾಜರಾಗಲಿಲ್ಲ. ಇದರ ನಡುವೆಯೇ ಕಾಂಗ್ರೆಸ್ನ ಬಿ.ನಾಗೇಂದ್ರ (ಬಳ್ಳಾರಿ ಗ್ರಾಮೀಣ), ಶ್ರೀಮಂತಪಾಟೀಲ( ಕಾಗವಾಡ), ಬಿಎಸ್ಪಿಯ ಎನ್.ಮಹೇಶ್(ಕೊಳ್ಳೇಗಾಲ) ಹಾಗೂ ಪಕ್ಷೇತರ ಶಾಸಕರಾದ ಆರ್.ಶಂಕರ್(ರಾಣೆಬೆನ್ನೂರು) ಹಾಗೂ ಎಚ್.ನಾಗೇಶ್ (ಮುಳಬಾಗಿಲು) ಗೈರು ಹಾಜರಾಗಿದ್ದರು.
ದೇವನಹಳ್ಳಿಯ ಪ್ರಕೃತಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ದಿಢೀರ್ ನಾಪತ್ತೆ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಇನ್ನು ಶಸ್ತ್ರಚಿಕಿತ್ಸೆಗೊಳಗಾಗಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಸದನಕ್ಕೆ ಬರಲು ಸಾಧ್ಯವಿಲ್ಲ ಎಂಬ ಮಾಹಿತಿ ನೀಡಿದ್ದರು.
ಬಿಎಸ್ಪಿಯ ಶಾಸಕ ಎನ್.ಮಹೇಶ್ ಯಾರಿಗೂ ಕೂಡ ಬೆಂಬಲ ನೀಡದೆ ತಟಸ್ಥವಾಗಿರಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್, ಇಲ್ಲವೆ ಬಿಜೆಪಿಗೆ ಬೆಂಬಲ ಕೊಡುವ ಬಗ್ಗೆ ಪಕ್ಷದ ಮುಖ್ಯಸ್ಥೆ ಮಾಯಾವತಿ ಯಾವುದೇ ಸೂಚನೆ ಕೊಟ್ಟಿರಲಿಲ್ಲ ಎನ್ನಲಾಗಿದೆ.
ಪಕ್ಷೇತರ ಶಾಸಕರಾದ ಎಚ್.ನಾಗೇಂದ್ರ ಮತ್ತು ಆರ್.ಶಂಕರ್ ಬಿಜೆಪಿಗೆ ಬೆಂಬಲ ನೀಡಲು ತೀರ್ಮಾನಿಸಿದ್ದು, ಅವರು ಕೂಡ ರಹಸ್ಯ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.