ವಿದ್ಯಾರ್ಥಿಗಳು ಓದಿನ ಜೊತೆ ಕ್ರೀಡೆಗೂ ಮಹತ್ವ ನೀಡಬೇಕು-ಮಾಜಿ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು,ಜು.18- ಮಕ್ಕಳು ಓದಿನೊಂದಿಗೆ ಕ್ರೀಡೆಗೂ ಮಹತ್ವ ನೀಡುವ ಅಗತ್ಯವಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.

ಜಯನಗರದ ಕಿತ್ತೂರುರಾಣಿ ಚನ್ನಮ್ಮ ಆಟದ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳವರೆಗೆ ನಡೆಯಲಿರುವ ರಾಜ್ಯಮಟ್ಟದ ಬಾಂಧವ ಎನ್.ನಾಗರಾಜ್ ಕೌನ್ಸಿಲರ್ ಕಪ್ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಗೂ ಗಮನಹರಿಸಿದರೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಉತ್ತಮವಾಗಿ ವ್ಯಾಸಂಗ ಮಾಡಬಹುದು ಎಂದು ಅವರು ಹೇಳಿದರು.

ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ನಮ್ಮಲ್ಲಿ ಉತ್ತಮ ಕ್ರೀಡಾಪಟುಗಳಿದ್ದರೂ ಅವರಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ಕ್ರೀಡೆಗೆ ಪ್ರೋತ್ಸಾಹ ನೀಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಕೀರ್ತಿ ಬೆಳಗಲಿದೆ ಎಂದರು.

ಕ್ರೀಡೆಗಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಹೆಚ್ಚಿನ ನೆರವು ನೀಡುತ್ತಿದೆ. ಈ ಸವಲತ್ತನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪಂದ್ಯಾವಳಿ ಆಯೋಜಕ ಎನ್.ನಾಗರಾಜ್ ಮಾತನಾಡಿ, ಫಿಸಿಕಲ್ ಎಜುಕೇಷನ್ ಸ್ಪೋಟ್ರ್ಸ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿರುವ 6ನೇ ರಾಜ್ಯ ಮಟ್ಟದ ಕೌನ್ಸಿಲರ್ ಕಪ್ ವಾಲಿಬಾಲ್ ಪಂದ್ಯಾವಳಿ ಇಂದು, ನಾಳೆ ಮತ್ತು ನಾಡಿದ್ದು ನಡೆಯಲಿದ್ದು, 2000 ವೀಕ್ಷಕರು ಪಂದ್ಯಾವಳಿಗೆ ಸಾಕ್ಷಿಯಾಗಿರುವುದರಿಂದ ಎಲ್ಲರಿಗೂ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಸರ್ಕಾರಿ ಅನುದಾನ ಹಾಗೂ ಖಾಸಗಿ ಶಾಲೆಗಳ 165 ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ತಂಡಗಳಿಗೆ ಬಾಂಧವ ಎನ್.ನಾಗರಾಜ್ ಕೌನ್ಸಿಲರ್ ಕಪ್ ನೀಡಿ ಗೌರವಿಸಲಾಗುವುದು.

ಶಾಲಾ ಮಕ್ಕಳಲ್ಲಿ ಕ್ರೀಡಾ ಪ್ರೀತಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಪಂದ್ಯಾವಳಿ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ನಾಗರಾಜ್ ಹೇಳಿದರು.
ಮೇಯರ್ ಗಂಗಾಂಬಿಕೆ, ಬೆಂಗಳೂರು ಇಂಟೇಲ್ ಶಾಲೆಯ ಸಂಸ್ಥಾಪಕ ಮುನಿರಾಜು ಮತ್ತಿತರ ಪಾಲಿಕೆ ಸದಸ್ಯರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ