ಬೆಂಗಳೂರು ; ರಾಜ್ಯ ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಗೆ ಕ್ಷಣಗಣನೆ ಆರಂಭವಾಗಿದೆ. ರೆಬೆಲ್ ಶಾಸಕರ ನಡೆಯಿಂದ ಮೈತ್ರಿಗೆ ಇಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಬಹುಮತದ ವೇಳೆ ಸರ್ಕಾರ ಬೀಳುವುದು ಬಹುತೇಕ ಖಚಿತ ಎನ್ನಲಾಗುತ್ತಿತ್ತು. ಆದರೆ, ಸಿಎಂ ಕುಮಾರಸ್ವಾಮಿಯವರ ನಡೆಯನ್ನು ಒಮ್ಮೆ ಗಮನಿಸಿದರೆ ಆಪರೇಷನ್ ಮೈತ್ರಿ ಮಾಡಿದ್ದಾರ? ಎಂಬ ಅನುಮಾನವೂ ಮೂಡುತ್ತಿದೆ. ಇದೇ ಕಾರಣಕ್ಕೆ ಬಿಜೆಪಿಗಿಂತ ಸಿಎಂ ಕುಮಾರಸ್ವಾಮಿ ತುಂಬಾ ಕಾನ್ಫಿಡೆಂಟ್ ಆಗಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ವಿಶ್ವಾಸಮತ ಯಾಚನೆ ನಡೆಯಲಿದೆ. ಇದು ಮೈತ್ರಿ ಪಾಲಿಗೆ ಅಳಿವು ಉಳಿವಿನ ಪ್ರಶ್ನೆ. ಆದರೆ, ಈ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದ ಕುಮಾರಸ್ವಾಮಿ ಇನ್ನೂ ತಮ್ಮ ಜೆಪಿ ನಗರದ ನಿವಾಸದಲ್ಲೇ ಇದ್ದಾರೆ. ಅಲ್ಲದೆ ಇಂದಿನ ಅಧಿವೇಶನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಆತ್ಮವಿಶ್ವಾಸವನ್ನು ಹೊರಹಾಕಿದ್ದಾರೆ. ಇವನ್ನೆಲ್ಲ ನೋಡಿದರೆ ಬಿಜೆಪಿಯಲ್ಲೂ ಸಿಎಂ ಆಪರೇಷನ್ ಮಾಡಿರುವ ಗುಮಾನಿ ಮೂಡುತ್ತಿದೆ.
ಆಪರೇಷನ್ಗೆ ಒಳಗಾಯ್ತ ಬಿಜೆಪಿ?;
ನಿನ್ನೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸಹ ಆಪರೇಷನ್ ಮೈತ್ರಿ ಕುರಿತು ಮಾಹಿತಿ ನೀಡಿದ್ದರು. ಅಲ್ಲದೆ ಸಿಎಂ ಕುಮಾರಸ್ವಾಮಿ ಖುದ್ದು ನನ್ನ ಬಳಿ ಆಪರೇಷನ್ ಮಾಡಿರುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು.
ರಾಯರೆಡ್ಡಿ ಹೇಳಿಕೆ ಹಾಗೂ ಮೈತ್ರಿ ಪಕ್ಷದ ಬಲ್ಲ ಮೂಲಗಳ ಪ್ರಕಾರ ಬಿಜೆಪಿ ಪಕ್ಷದ ಕೆಲ ಶಾಸಕರನ್ನು ಸಿಎಂ ಕುಮಾರಸ್ವಾಮಿ ಈಗಾಗಲೇ ತನ್ನ ಬಳಿ ಸೆಳೆದಿದ್ದಾರೆ ಎನ್ನಲಾಗುತ್ತಿದೆ. ಈ ಶಾಸಕರು ಇಂದು ವಿಧಾನಸೌಧಕ್ಕೆ ಗೈರಾಗಲಿದ್ದಾರೆ, ಒಂದು ವೇಳೆ ಬಂದರೂ ಸಹ ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೆ, ಕೆಲ ಅತೃಪ್ತ ಶಾಸಕರು ಸಹ ಕೊನೆ ಕ್ಷಣದಲ್ಲಿ ಮೈತ್ರಿ ಸರ್ಕಾರವನ್ನು ಬೆಂಬಲಿಸಲಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಕುಮಾರಸ್ವಾಮಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದು ನಿಜವಾಗಿದ್ದರೆ ಸಿಎಂ ಇಂದು ಬಹುಮತ ಸಾಬೀತುಪಡಿಸುವುದು ಬಹುತೇಕ ಖಚಿತ ಎಂಬುದಲ್ಲಿ ಎರಡು ಮಾತಿಲ್ಲ.