ಬೆಂಗಳೂರು, ಜು.18-ತಾಂತ್ರಿಕ ದೋಷದಿಂದಾಗಿ ರದ್ದಾಗಿದ್ದ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ್-2 ಗಗನನೌಕೆ ಉಡಾವಣೆಗೆ ಜುಲೈ 22(ಸೋಮವಾರ) ದಿನಾಂಕ ನಿಗದಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇಂದು ಅಧಿಕೃತವಾಗಿ ಘೋಷಿಸಿದೆ.
ಚಂದ್ರಯಾನ-2 ಜುಲೈ 15ರಂದೇ ಉಡಾವಣೆ ಆಗಬೇಕಿತ್ತು. ಆದರೆ 1.55ರ ನಸುಕಿನ ನಿಗದಿತ ಉಡ್ಡಯನಕ್ಕೆ ಮುನ್ನವೇ ಬಹು ಪ್ರಬಲ ಜಿಎಸ್ಎಲ್ವಿ-ಮಾರ್ಕ್-2 (ಬಾಹುಬಲಿ) ರಾಕೆಟ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಹೀಗಾಗಿ ರಾಕೆಟ್ ಉಡಾವಣೆಗೆ 56 ನಿಮಿಷಗಳು ಮತ್ತು 24 ಸೆಕೆಂಡ್ಗಳಲ್ಲಿ ತಾಂತ್ರಿಕ ನ್ಯೂನತೆ ಕಾಣಿಸಿಕೊಂಡಿತು. ಇದರಿಂದ ಯೋಜನೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಯಿತು.
ಮುಂದೂಡಲ್ಪಟ್ಟ ಚಂದ್ರಯಾನ್-2 ರಾಕೆಟ್ ಉಡಾವಣೆ ಜುಲೈ 22ರಂದು ಸೋಮವಾರ ಮಧ್ಯಾಹ್ನ 2.43ರಲ್ಲಿ ಉಡಾವಣೆಗೆ ದಿನಾಂಕ ಮತ್ತು ಸಮಯ ನಿಗದಿಗೊಳಿಸಲಾಗಿದೆ ಎಂದು ಇಸ್ರೋ ಇಂದು ಬೆಳಗ್ಗೆ ಟ್ವೀಟ್ ಮಾಡಿದೆ.
ಚಂದ್ರಯಾನ್-2 ಉಡಾವಣೆ ಯೋಜನೆಗೆ ಸಂಬಂಧಿಸಿದಂತೆ ಬಹುತೇಕ ಎಲ್ಲ ತಾಲೀಮು ಮತ್ತು ಸಿದ್ದತೆಗಳು ಪೂರ್ಣಗೊಂಡಿದೆ. ರಾಕೆಟ್ನಲ್ಲಿ ಕಂಡುಬಂದಿದ್ದ ದೋಷಗಳನ್ನು ಸರಿಪಡಿಸಲಾಗುತ್ತಿದ್ದು, ಮತ್ತೊಂದು ಸುತ್ತಿನ ಸಮಗ್ರ ಪರಿಶೀಲನೆ ನಡೆಯುತ್ತಿದೆ.