ಬೆಂಗಳೂರು,ಜು.18- ಸರ್ಕಾರ ರಚನೆ ಮಾಡುವ ಅತಿಯಾದ ಆತ್ಮವಿಶ್ವಾಸದಲ್ಲಿರುವ ಬಿಜೆಪಿಯ ಎಲ್ಲ ಶಾಸಕರು ಇಂದು ರೆಸಾರ್ಟ್ನಿಂದ ನೇರವಾಗಿ ವಿಧಾನಸೌಧಕ್ಕೆ ಭಾರೀ ಪೊಲೀಸ್ ಬಿಗಿಭದ್ರತೆಯಲ್ಲಿ ಆಗಮಿಸಿದರು.
ಯಲಹಂಕ ಹೊರವಲಯದ ರಮಡಾ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ 105 ಮಂದಿ ಶಾಸಕರನ್ನು ಎರಡು ಖಾಸಗಿ ಬಸ್ಗಳು ಹಾಗೂ ಒಂದು ಟಿಟಿ ವಾಹನದಲ್ಲಿ ಪೊಲೀಸರ ಸರ್ಪಗಾವಲಿನ ನಡುವೆ ಕರೆತರಲಾಯಿತು.
9.25ಕ್ಕೆ ರಮಡಾ ರೆಸಾರ್ಟ್ನಿಂದ ಹೊರಟ ವಾಹನಗಳು ಯಲಹಂಕ ಸಮೀಪ ಆಗಮಿಸುತ್ತಿದ್ದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಹೂಮಳೆ ಸುರಿಸಿ ಸಿಹಿ ಹಂಚಿ ಜೈಕಾರ ಕೂಗಿ ಸಂಭ್ರಮಿಸಿದರು.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಬೆಳಗ್ಗೆಯಿಂದಲೇ ಪಕ್ಷದ ಪ್ರಮುಖರನ್ನು ಸ್ವಾಗತಿಸಲು ಸಜ್ಜಾಗಿದ್ದರು.
ವಾಹನಗಳು ಯಲಹಂಕಕ್ಕೆ ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ… ಬಿಜೆಪಿ ಜಿಂದಾಬಾದ್ ಎಂದು ಜೈಕಾರದ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಈ ವೇಳೆ ಯಡಿಯೂರಪ್ಪ ಸೇರಿದಂತೆ ಅನೇಕರಿಗೆ ಹೂವಿನ ಹಾರಗಳನ್ನು ಹಾಕಿ ವಾಹನಗಳಿಗೆ ಹೂಗುಚ್ಚಗಳನ್ನು ಅಂಟಿಸಿ ಎಲ್ಲ ಶಾಸಕರಿಗೂ ಶುಭ ಕೋರಿದರು.
ಶಾಸಕರಿದ್ದ ವಾಹನಗಳು ಕೊಡಿಗೆಹಳ್ಳಿ, ಹೆಬ್ಬಾಳ, ವಿಂಡ್ಸರ್ಮ್ಯಾನರ್ನಿಂದ ಚಾಲುಕ್ಯ ವೃತ್ತದ ಮೂಲಕ ವಿಧಾನಸೌಧಕ್ಕೆ ಆಗಮಿಸಿದವು.