ಬೆಂಗಳೂರು, ಜು.18-ಸಂವಿಧಾನಬದ್ಧವಾಗಿ ರಚಿತವಾಗಿರುವ ಸರ್ಕಾರವನ್ನು ಅಸ್ಥಿರಗೊಳಿಸುವ ಕುಟಿಲ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆರೋಪಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ವಿಶ್ವಾಸಮತಯಾಚನೆ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಕ್ರಿಯಾಲೋಪ ಎತ್ತಿ ಮಾತನಾಡಿದ ಅವರು, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದ ಹಿಂದೆ ಬಿಜೆಪಿ ಇದೆ ಎಂಬರ್ಥದಲ್ಲಿ ಮಾತನಾಡಿದರು. ರಾಜೀನಾಮೆ ನೀಡಿರುವ 15 ಶಾಸಕರು ಸದನಕ್ಕೆ ಬರದಂತೆ ತಡೆಯುತ್ತಿರುವವರು ಯಾರು? ಅವರು ಓಡಾಡಲು ವಿಶೇಷ ವಿಮಾನದ ವ್ಯವಸ್ಥೆ ಯಾರು ಮಾಡಿದ್ದಾರೆ? ಶಾಸಕರನ್ನು ತಡೆಯುತ್ತಿರುವವರು ಬಿಜೆಪಿಯವರೇ ಎಂದು ಆರೋಪಿಸಿದರು.
ಬಿಜೆಪಿ ಶಾಸಕರನ್ನು ಉದ್ದೇಶಿಸಿ ಬಹಳ ಸಂತೋಷದಲ್ಲಿ ತೇಲಾಡುತ್ತಿದ್ದಾರೆ. ಬಹಳ ಆತುರವಾಗಿದ್ದೀರಿ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಲು ಪ್ರಯತ್ನ ನಡೆಸುತ್ತಿದ್ದೀರಿ. ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಪ್ರಜಾಪ್ರಭುತ್ವ ಉಳಿಸುವ ಕೆಲಸ ಆಗಬೇಕಿದೆ, ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ಜನರಿಗೆ ಗೊತ್ತಾಗಲಿ ಎಂದರು.
ಇದಕ್ಕೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಜಗದೀಶ್ ಶೆಟ್ಟರ್, ಶಾಸಕರಾದ ಮಾಧುಸ್ವಾಮಿ, ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಯಾಗಿ ಆಡಳಿತ ಪಕ್ಷದ ಕೆ.ಜೆ.ಜಾರ್ಜ್, ವೆಂಕಟರಾವ್ ನಾಡಗೌಡ ಪ್ರತಿ ಆಕ್ಷೇಪ ವ್ಯಕ್ತಪಡಿಸಿದಾಗ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.
ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು, ಯಾವುದಕ್ಕೆ ಅನುಮತಿ ನೀಡಬೇಕು, ಯಾವುದಕ್ಕೆ ನೀಡಬಾರದು ಎಂಬುದನ್ನು ತೀರ್ಮಾನಿಸುವುದಾಗಿ ಹೇಳಿ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರನ್ನು ಸಮಾಧಾನಪಡಿಸಿದರು.
ಮಾತು ಮುಂದುವರೆಸಿದ ಸಿದ್ದರಾಮಯ್ಯ ಅವರು ಸಂವಿಧಾನದ 10ನೇ ಷೆಡ್ಯೂಲ್ ಪ್ರಕಾರ ಕಾಂಗ್ರೆಸ್ ಪಕ್ಷದ ಶಾಸಕರಿಗೆ ವಿಪ್ ನೀಡಲಾಗಿದೆ. 10 ಮಂದಿ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಗುಂಪಾಗಿಯೇ ಹೋಗಿದ್ದಾರೆ. ಒಬ್ಬೊಬ್ಬರೇ ಹೋಗಿಲ್ಲ. ಜೆಡಿಎಸ್-ಕಾಂಗ್ರೆಸ್‍ನ ಹಲವು ಸದಸ್ಯರು ರಾಜೀನಾಮೆ ಕೊಟ್ಟು ಒಟ್ಟಾಗಿ ಹೋಗಿದ್ದಾರೆ ಎಂದರು.
ಸಂವಿಧಾನದ 10ನೇ ಷೆಡ್ಯೂಲ್ ಈಗಲೂ ಚಾಲ್ತಿಯಲ್ಲಿದ್ದು, ರಾಜಕೀಯ ಪಕ್ಷಗಳಿಗೆ ವಿಪ್ ಕೊಡುವ ಅಧಿಕಾರವಿದೆ. ಇದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಎಲ್ಲ ಪಕ್ಷಗಳಿಗೂ ಅನ್ವಯವಾಗುತ್ತದೆ. ವಿಪ್ ನೀಡಿ ಸದನಕ್ಕೆ ಹಾಜರಾಗಬೇಕೆಂದು ಹೇಳಿದ್ದರೂ ಅವರು ಹೋಗಿದ್ದಾರೆ ಎಂದರು.
ಶಾಸಕ ಪ್ರತಾಪ್‍ಗೌಡ ಪಾಟೀಲ್ ಮತ್ತು ಇತರೆ 9 ಮಂದಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಜೊತೆಗೆ ಇತರೆ ಐದು ಮಂದಿ ಶಾಸಕರು ಕೂಡ ಸೇರ್ಪಡೆಯಾಗಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರು ಸುಪ್ರೀಂಕೋರ್ಟ್‍ಗೆ ಹೋಗಿರುವ ವಿಚಾರದಲ್ಲಿ ನ್ಯಾಯಾಲಯವು ಶಾಸಕಾಂಗ ಪಕ್ಷದ ನಾಯಕನಾದ ತಮ್ಮನ್ನಾಗಲಿ, ಕಾಂಗ್ರೆಸ್ ಪಕ್ಷವನ್ನಾಗಲಿ ಪ್ರತಿವಾದಿಯನ್ನಾಗಿ ಮಾಡಿಲ್ಲ. ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ ಶಾಸಕರು ಸದನದಲ್ಲಿ ಹಾಜರಾಗುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದೆ ಎಂಬ ಅಂಶವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದರು.
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಯಿತು. ಆ ಕೀರ್ತಿ ಅವರಿಗೇ ಸಲ್ಲಬೇಕು ಎಂದಾಗ, ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.
ಪ್ರೊ.ಮಧು ದಂಡವತೆ ಅವರು ಪಕ್ಷಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದ ವಿಧೇಯಕದ ಚರ್ಚೆಯಲ್ಲಿ ಪಾಲ್ಗೊಂಡು ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರಿಗೆ ಗೌರವ ಸಲ್ಲಿಸುವುದೇ ಆದರೆ ಪಕ್ಷಾಂತರ ಪಿಡುಗನ್ನು ಕೊನೆಗಾಣಿಸಬೇಕು ಎಂದು ಹೇಳಿದರು.
ರಾಜಕೀಯ ಶುದ್ಧೀಕರಣ ಮಾಡಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಆ ವಿಧೇಯಕವನ್ನು ಎಲ್ಲರೂ ಸ್ವಾಗತಿಸಿದ್ದರು ಎಂದು ಸದನದ ಗಮನಕ್ಕೆ ತಂದರು.
ಒಂದು ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಕ್ರಿಯಾಲೋಪದ ವಿಚಾರದಲ್ಲಿ ವಿಸ್ತೃತವಾದ ಚರ್ಚೆ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಸೂಕ್ಷ್ಮವಾಗಿ ಹೇಳಿರುವುದಾಗಿ ತಿಳಿಸಿದರು.
ಆಗ ಮಾತು ಮುಂದುವರೆಸಿದ ಸಭಾಧ್ಯಕ್ಷರು, ಸದನದಲ್ಲಿ ಹಾಲಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಭಾವಿ ಮುಖ್ಯಮಂತ್ರಿ ಅವರಿದ್ದಾರೆ.ನಾನೇ ಎರಡನೇ ಬಾರಿಗೆ ಸಭಾಧ್ಯಕ್ಷನಾಗಿದ್ದೇನೆ ಎಂದರು.
ಆಗ ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಭಾಧ್ಯಕ್ಷರಾಗಿರುವುದರಿಂದ ಹೆಚ್ಚು ಅನುಭವವಿದೆ, ತಡೆದುಕೊಳ್ಳುವ ಶಕ್ತಿ ಇದೆ ಎಂದರು.