ಬೆಂಗಳೂರು, ಜು.17-ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಪತನದ ಅಂಚಿಗೆ ತಲುಪಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ.
ಇಂದು ನಡೆಯುವ ಅಧಿವೇಶನದ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ. ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಪ್ರಸ್ತಾಪವಾಗುವುದರಿಂದ ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಿ ಸರ್ಕಾರ ಉಳಿಸಿಕೊಳ್ಳುತ್ತಾರೆಯೋ, ಇಲ್ಲವೇ ಸಾಬೀತುಪಡಿಸಲಾಗದೆ ಸರ್ಕಾರವನ್ನು ಕಳೆದುಕೊಳ್ಳಬೇಕಾಗುತ್ತದೋ ಎಂಬ ಜಿಜ್ಞಾಸೆ ನಡೆದಿದೆ. ಹೀಗಾಗಿ ನಾಳಿನ ಅಧಿವೇಶನ ಪ್ರಮುಖವಾಗಿದ್ದು, ರಾಜಕೀಯವಾಗಿ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಇರುವ ಬೆಂಬಲವನ್ನು ಸಾಬೀತುಪಡಿಸಲು ವಿಶ್ವಾಸ ಮತ ಯಾಚಿಸುವುದಾಗಿ ಸ್ವತಃ ಮುಖ್ಯಮಂತ್ರಿಯೇ ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷರು ನಾಳೆ ಸಮಯ ನಿಗದಿಪಡಿಸಿದ್ದಾರೆ. ಗುರುವಾರವಾದ ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ನಿರ್ಣಯದ ಪ್ರಸ್ತಾಪವಾಗಲಿದೆ.
ರಾಜೀನಾಮೆ ನೀಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರು ಮನವೊಲಿಕೆಯ ಪ್ರಯತ್ನಗಳಿಗೆ ಇದುವರೆಗೂ ಮಣಿದಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸುವ ಸತತ ಪ್ರಯತ್ನಗಳನ್ನು ನಡೆಸಿದರೂ ನಿರೀಕ್ಷಿತ ಫಲ ದೊರೆಯಲಿಲ್ಲ. ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿ ಎಲ್ಲ ಸಚಿವರ ರಾಜೀನಾಮೆ ಪಡೆಯಲಾಗಿದೆ.
ಸಚಿವ ಸಂಪುಟವನ್ನು ಪುನಾರಚನೆ ಮಾಡಲಿದ್ದು, ಆ ಸಂದರ್ಭದಲ್ಲಿ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರೂ ಯಾವೊಬ್ಬ ಶಾಸಕರು ಈ ತನಕ ರಾಜೀನಾಮೆ ವಾಪಸ್ ಪಡೆಯುವ ಪ್ರಯತ್ನ ಮಾಡಿಲ್ಲ. ತಮ್ಮ ನಿಲುವಿಗೆ ಅಂಟಿಕೊಂಡಿದ್ದು, ರಾಜೀನಾಮೆ ಅಂಗೀಕಾರ ಮಾಡಬೇಕೆಂದು ಮನವಿಯನ್ನು ಸಭಾಧ್ಯಕ್ಷರಲ್ಲಿ ಮಾಡಿದ್ದಾರೆ.
ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕ, ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಅಲ್ಲದೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಲಹೆ, ಮಾರ್ಗದರ್ಶನವನ್ನು ಪ್ರತಿದಿನವೂ ಪಡೆಯುತ್ತಿದ್ದಾರೆ.
ಮೈತ್ರಿ ಸರ್ಕಾರ ಹಾಗೂ ಕುಮಾರಸ್ವಾಮಿಯವರ ಪಾಲಿಗೆ ಇಂದು ನಿರ್ಣಾಯಕ ದಿನವಾಗಿದ್ದು, ಬಹುಮತ ಸಾಬೀತುಪಡಿಸಿ ಸರ್ಕಾರ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಬಿಜೆಪಿ ಮೈತ್ರಿ ಸರ್ಕಾರ ಪತನವಾಗುವುದು ನಿಶ್ಚಿತ ಎಂದು ಭಾವಿಸಿದ್ದು, ಸರ್ಕಾರ ರಚನೆ ಮಾಡುವ ಉತ್ಸಾಹದಲ್ಲಿದೆ.
ವಿಧಾನಸಭೆಯಲ್ಲಿ ಪ್ರಸ್ತಾಪವಾಗುವ ವಿಶ್ವಾಸ ಮತದಲ್ಲಿ ಯಾರಿಗೆ ಜಯ ಸಿಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಮೇಲ್ನೋಟಕ್ಕೆ ಮೈತ್ರಿ ಸರ್ಕಾರಕ್ಕೆ ನಿರೀಕ್ಷಿತ ಶಾಸಕರ ಬೆಂಬಲವಿಲ್ಲದಿರುವುದು ಕಂಡುಬರುತ್ತಿದೆ. ಆದರೂ ಕುಮಾರಸ್ವಾಮಿಯವರು ವಿಶ್ವಾಸ ಮತ ಸಾಬೀತುಪಡಿಸುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ವಿಧಾನಸಭೆಯಲ್ಲಿ ನಡೆಯುವ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಯಾರಿಗೆ ಜಯ ದೊರೆಯಲಿದೆ ಎಂಬುದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.
ಕುಮಾರಸ್ವಾಮಿಯವರು ಕೂಡ ಸರ್ಕಾರ ಉಳಿಸಿಕೊಳ್ಳಲು ಬಹುಮತ ಸಾಬೀತುಪಡಿಸಲು ಬೇಕಾಗಿರುವ ಕೊನೆ ಘಳಿಗೆ ಪ್ರಯತ್ನವನ್ನು ನಡೆಸುತ್ತಿದ್ದಾರೆ. ವಿಶ್ವಾಸ ಮತವನ್ನು ಸಾಬೀತುಪಡಿಸಲು ರೂಪಿಸಿರುವ ಕಾರ್ಯತಂತ್ರ ಯಾವುದು ಎಂಬ ಗುಟ್ಟನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ.
ಸರ್ಕಾರ ಉಳಿಸಿಕೊಳ್ಳುವ ಪೂರ್ಣ ಜವಾಬ್ದಾರಿ ಕುಮಾರಸ್ವಾಮಿ ಹೊತ್ತುಕೊಂಡಿದ್ದು, ಈ ಬಗ್ಗೆ ರೆಸಾರ್ಟ್‍ನಲ್ಲಿ ಬೀಡುಬಿಟ್ಟಿರುವ ಜೆಡಿಎಸ್ ಶಾಸಕರಿಗೂ ಮಾಹಿತಿ ನೀಡಿದ್ದಾರೆ. ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ಮೈತ್ರಿ ಸರ್ಕಾರಕ್ಕೆ ಗಂಡಾಂತರ ಎದುರಾಗಿದ್ದರೂ ಬಹುಮತ ಸಾಬೀತುಪಡಿಸುವ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದೆಂಬ ಅಭಯವನ್ನು ಕುಮಾರಸ್ವಾಮಿ ನೀಡಿದ್ದಾರೆ.