ನವದೆಹಲಿ,ಜು.17- ಕಾಂಗ್ರೆಸ್ ಹಾಗೂ ಜೆಡಿಎಸ್ನ 15 ಮಂದಿ ಶಾಸಕರ ರಾಜೀನಾಮೆಯನ್ನು ವಿಧಾನಸಭೆಯ ಸ್ಪೀಕರ್ ತೀರ್ಮಾನಿಸಬೇಕೆಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್, ನಾಳೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಭಿನ್ನಮತೀಯರಿಗೆ ವಿಪ್ ಹಾಗೂ ಒತ್ತಾಯ ಮಾಡುವಂತಿಲ್ಲ ಎಂಬ ಮಹತ್ವದ ಮಧ್ಯಂತರ ತೀರ್ಪು ನೀಡಿದೆ.
ನ್ಯಾಯಾಲಯದ ಈ ತೀರ್ಪಿನಿಂದಾಗಿ ರಾಜೀನಾಮೆ ನೀಡಿರುವ 16 ಮಂದಿ(ರಾಮಲಿಂಗಾರೆಡ್ಡಿ ಸೇರಿ) ಶಾಸಕರ ಭವಿಷ್ಯವನ್ನು ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ತೀರ್ಮಾನಿಸಲಿದ್ದಾರೆ.
ಒಂದು ವೇಳೆ ಸ್ಪೀಕರ್ 16 ಮಂದಿ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದರೆ ಇಲ್ಲವೇ ಸದಸ್ಯತ್ವದಿಂದ ಅವರನ್ನು ಅನರ್ಹಗೊಳಿಸಿದರೆ ಸಮ್ಮಿಶ್ರ ಸರ್ಕಾರ ನಾಳೆ ಸದನದಲ್ಲಿ ಬಹುಮತ ಕಳೆದುಕೊಳ್ಳುವುದು 100ಕ್ಕೆ ನೂರರಷ್ಟು ಖಚಿತ.
ಸ್ಪೀಕರ್ ಏನೇ ನಿರ್ಧಾರ ಕೈಗೊಂಡರೂ ಬಿಜೆಪಿ ಅಧಿಕಾರ ರಚನೆಗೆ ದಾರಿ ಬಹುತೇಕ ಸುಗಮವಾಗಿದೆ. ಅಂತಿಮವಾಗಿ ಸ್ಪೀಕರ್ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಎಲ್ಲವೂ ಅವಲಂಬಿತವಾಗಿದೆ.
ತಮ್ಮ ರಾಜೀನಾಮ ಪತ್ರವನ್ನು ತ್ವರಿತವಾಗಿ ಅಂಗೀಕರಿಸುವಂತೆ ಸ್ಪೀಕರ್ಗೆ ನಿರ್ದೇಶನ ನೀಡುವಂತೆ 15 ಮಂದಿ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಎರಡೂ ಕಡೆ ನಿನ್ನೆ ಸುಧೀರ್ಘ ವಾದ-ವಿವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್, ದೀಪಕ್ ಗುಪ್ತ ಹಾಗೂ ಅನಿರುದ್ಧ್ ಬೋಸ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದಿಗೆ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿತು.
ಕೇವಲ ಎರಡೇ ವಾಕ್ಯದಲ್ಲಿ ಮಧ್ಯಂತರ ಆದೇಶ ನೀಡಿದ ನ್ಯಾಯಾಲಯ ನಾವು ಸಂವಿಧಾನವನ್ನು ಕಾಪಾಡಬೇಕು. ಸಂವಿಧಾನದ ಸಮತೋಲನ ಅತ್ಯಗತ್ಯ. ಸ್ಪೀಕರ್ಗೆ ನಾವು ಇಂತಿಷ್ಟೇ ಅವಧಿಯಲ್ಲಿ ರಾಜೀನಾಮೆ ಅಂಗೀಕರಿಸುವಂತೆ ನಾವು ನಿರ್ದೇಶನ ನೀಡುವುದಿಲ್ಲ. ಕಾಲಮಿತಿಯೊಳಗೆ ಅವರು ನಿರ್ಧರಿಸಬೇಕೆಂದು ಸೂಚಿಸಿದೆ.
ಶಾಸಕರಿಗೆ ಅಧಿವೇಶನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಯಾರೊಬ್ಬರಿಗೂ ಒತ್ತಡ ಹೇರುವಂತಿಲ್ಲ. ಅವರಿಗೆ ವಿಪ್ ಕೂಡ ನೀಡುವಂತಿಲ್ಲ. ಶಾಸಕರ ಅನರ್ಹತೆ ಹಾಗೂ ರಾಜೀನಾಮೆಯನ್ನು ಸ್ಪೀಕರ್ ಅವರೇ ನಿರ್ಧರಿಸಬೇಕು ಎಂದು ಸೂಚನೆ ಕೊಟ್ಟರು.
ಕಳೆದ 6ರಂದು ಕಾಂಗ್ರೆಸ್-ಜೆಡಿಎಸ್ನ ಒಟ್ಟು 16 ಮಂದಿ ಶಾಸಕರು ರಾಜೀನಾಮೆ ನೀಡಿದ್ದರು. ಆದರೆ ಇದರಲ್ಲಿ ಕೆಲವರ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕೆ 2ನೇ ಬಾರಿಗೆ ಕೆಲವರಿಂದ ರಾಜೀನಾಮೆಯನ್ನು ಪಡೆಯಲಾಗಿತ್ತು.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜು.11ರಂದು ಮುಂಬೈನಿಂದ ಅತೃಪ್ತ ಶಾಸಕರು ಬೆಂಗಳೂರಿಗೆ ಆಗಮಿಸಿ ಸ್ಪೀಕರ್ಗೆ ಹೊಸ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಅಂದು ಅತೃಪ್ತರೊಂದಿಗೆ ನಡೆಸಿದ ಕಲಾಪಗಳನ್ನು ವಿಡಿಯೋ ಮಾಡಿಸಿದ್ದ ಸ್ಪೀಕರ್? ಅದೆಲ್ಲವನ್ನೂ ಕೋರ್ಟ್ಗೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಸುಪ್ರೀಂ ಮಧ್ಯಪ್ರವೇಶದ ಬಗ್ಗೆ ಸಣ್ಣ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಜೀನಾಮೆ ನೀಡಿದವರು
1. ರಮೇಶ್ ಜಾರಕಿಹೊಳಿ
2. ಪ್ರತಾಪ್ ಗೌಡ ಪಾಟೀಲ್
3. ಮಹೇಶ್ ಕುಮಟಳ್ಳಿ
4. ಬಿ.ಸಿ.ಪಾಟೀಲ್
5. ಎಸ್.ಟಿ.ಸೋಮಶೇಖರ್
6. ಭೆರತಿ ಬಸವರಾಜ್
7. ಮುನಿರತ್ನ
8. ರೋಷನ್ ಬೇಗ್
9. ಶಿವರಾಮ್ ಹೆಬ್ಬಾರ್
10. ಗೋಪಾಲಯ್ಯ
11. ವಿಶ್ವನಾಥ್
12. ನಾರಾಯಣಗೌಡ
13. ಆನಂದಸಿಂಗ್
14. ಎಂಟಿಬಿ ನಾಗರಾಜ್
15. ಡಾ.ಕೆ.ಸುಧಾಕರ್
16. ರಾಮಲಿಂಗಾ ರೆಡ್ಡಿ