ಮೈತ್ರಿ ಸರ್ಕಾರದ ಬುಡವನ್ನೇ ಅಲುಗಾಡಿಸಿದ ಮಧ್ಯಂತರ ತೀರ್ಪು

ಬೆಂಗಳೂರು,ಜು.17- ಅತೃಪ್ತ ಶಾಸಕರ ರಾಜೀನಾಮೆ ವಿಷಯವಾಗಿ ಸುಪ್ರೀಂಕೊರ್ಟ್ ನೀಡಿರುವ ಮಧ್ಯಂತರ ತೀರ್ಪು ಮೈತ್ರಿ ಸರಕಾರದ ಬುಡವನ್ನೇ ಅಲುಗಾಡಿಸಿದೆ.

ಶಾಸಕರ ರಾಜೀನಾಮೆ ವಿಚಾರವಾಗಿ ಯಾವುದೇ ನಿರ್ಣಯ ಕೈಗೊಳ್ಳಲು ಸ್ಪೀಕರ್ ಸ್ವತಂತ್ರ ಎಂದಿದ್ದರೂ ಗುರುವಾರ ವಿಶ್ವಾಸಮತದಲ್ಲಿ ಭಾಗವಹಿಸದಿರಲು ಶಾಸಕರು ಸ್ವತಂತ್ರರು ಮತ್ತು ಅವರಿಗೆ ವಿಪ್ ಜಾರಿ ಆಗುವುದಿಲ್ಲ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಸರಕಾರದ ಹಾದಿಯನ್ನು ದುರ್ಗಮಗೊಳಿಸಿದೆ.

ಒಂದು ವೇಳೇ ಎಲ್ಲ ಅತೃಪ್ತ ಶಾಸಕರೂ ಸದನ ಕಲಾಪದಿಂದ ಗೈರಾದರೆ (ಬಹುತೇಕ ಖಚಿತ) ಸರಕಾರ ಅಲ್ಪಮತಕ್ಕೆ ಕುಸಿಯಲಿದ್ದು ವಿಶ್ವಾಸ ಮತ ಕಳೆದುಕೊಳ್ಳುವುದು ನಿಶ್ಚಿತ ಎಂಬಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

ಅನರ್ಹತೆಯ ದಂಡ ಹಿಡಿದು ಒಂದಿಷ್ಟು ಬೆದರಿಸುವ ಮೂಲಕ ಸಣ್ಣ ಪ್ರಮಾಣದ ಸಂಧಾನ ನಡೆಸುವ ಪ್ರಯತ್ನಗಳಿಗೆ ಸುಪ್ರೀಂ ತೀರ್ಪು ತಣ್ಣೀರು ಎರಚಿದೆ.

ವಿಪ್ ನೀಡಿ ಅದನ್ನು ಉಲ್ಲಂಘಿಸಿದರೆ ಅಂತಹ ಶಾಸಕರನ್ನು ಅನರ್ಹಗೊಳಿಸಿ ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರುವ ಕಠಿಣ ಕ್ರಮ ಕೈಗೊಳ್ಳುವ ಬೆದರಿಕೆಯನ್ನು ಕಾಂಗ್ರೆಸ್-ಜೆಡಿಎಸ್ ನಾಯಕರು ಒಡ್ಡಿದ್ದರು. ಆದರೆ ಈ ತೀರ್ಪಿನಿಂದಾಗಿ ಆ ಮಾರ್ಗವೂ ಸರಕಾರಕ್ಕೆ ಬಂದ್ ಆಗಿದೆ.

ಒಂದೊಮ್ಮೆ ಶಾಸಕ ಸ್ಥಾನದಿಂದ ಅನರ್ಹಗೊಂಡರೂ ಅದು ಅವರು ಆಯ್ಕೆಯಾದ ಅವಧಿಗೆ ಮಾತ್ರ ಎಂದು ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಾಗಿ ಅನರ್ಹಗೊಂಡರು ಎಂಬ ಅಪವಾದ ಹೊರತುಪಡಿಸಿ ಅವರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಸಮಸ್ಯೆ ಇರುವುದಿಲ್ಲ.

ಉಪ ಚುನಾವಣೆಯಲ್ಲಿ ತಮಗೆ ಬೇಕಾದ ಪಕ್ಷದಿಂದ ಸ್ಪರ್ಧಿಸಿ ಮತ್ತೆ ಗೆದ್ದು ಬರಬಹುದು.ಅಷ್ಟರಲ್ಲಿ ಸರ್ಕಾರ ಬಿದ್ದುಹೋಗಿರುತ್ತದೆ.

ಬಹುಮತ ಸಾಬೀತು ನಿರ್ಧಾರವಾಗುವುದು ವಿಧಾನಸಭೆಯ ಒಳಗೆ ಮತ್ತು ವಿಶ್ವಾಸಮತ ಕೋರುವ ಸಂದರ್ಭದಲ್ಲಿ ಸದನದಲ್ಲಿರುವ ಸದಸ್ಯರ ಸಂಖ್ಯೆಯ ಆಧಾರದ ಮೇಲೆ. ಈ ವೇಳೆ ಶಾಸಕರು ಗೈರು ಹಾಜರಾದರೂ ಅವರ ಮೇಲೆ ಕಾನೂನು ಕ್ರಮ ಜರುಗಿಸುವುದು (ಶಾಸಕ ಸ್ಥಾನದಿಂದ ಅನರ್ಹಗೊಳಿಸುವುದು) ನಂತರದ ಮಾತು.

ಸರ್ಕಾರ ಉಳಿಯಬೇಕಾದರೆ:
ಮೈತ್ರಿ ಸರ್ಕಾರ ಉಳಿಯಬೇಕಾದರೆ ಪ್ರಸ್ತುತ ರಾಜಿನಾಮೆ ನೀಡಿರುವ 16 ಶಾಸಕರ ಪೈಕಿ ಕನಿಷ್ಠ 10 ಮಂದಿಯಾದರೂ ತಮ್ಮ ರಾಜಿನಾಮೆ ವಾಪಸ್ ಪಡೆಯಬೇಕು. ಇಲ್ಲವೇ ಪ್ರತಿಪಕ್ಷ ಬಿಜೆಪಿಯ 6-7 ಶಾಸಕರು ವಿಶ್ವಾಸಮತ ಯಾಚನೆ ವೇಳೆ ಸದನದಿಂದ ಹೊರಗುಳಿಯಬೇಕು. ಇಲ್ಲವಾದಲ್ಲಿ, 4-5 ಬಿಜೆಪಿ ಶಾಸಕರು ಸದನದಿಂದ ಹೊರಗುಳಿದು, ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದಿರುವ ಇಬ್ಬರು ಪಕ್ಷೇತರರು ಮತ್ತೆ ಬೆಂಬಲ ನೀಡಬೇಕು.ಆಗ ಬಿಜೆಪಿ ಸದಸ್ಯರು ಶಾಸಕ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ.

ಆದರೆ, ಮೈತ್ರಿ ಸರ್ಕಾರವನ್ನು ಉರುಳಿಸಿ ಹೊಸ ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ಅದಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಅಧಿಕಾರದ ಕನಸು ಕಾಣುತ್ತಿರುವ ಈ ಶಾಸಕರಾರೂ ಸರ್ಕಾರ ಉಳಿಸುವ ಪ್ರಯತ್ನಕ್ಕೆ ಕೈಹಾಕಿ ತಮ್ಮ ತಲೆ ಮೇಲೆ ತಾವೇ ಚಪ್ಪಡಿ ಕಲ್ಲು ಎಳೆದುಕೊಳ್ಳುವ ದುಸ್ಸಾಹಸ ಮಾಡುವುದೂ ಇಲ್ಲ.

ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯದ ಹೊರತು ಬಹುಮತ ಕಳೆದುಕೊಳ್ಳುವ ಸರ್ಕಾರವನ್ನು ದೇವರು ಕೂಡ ಕಾಪಾಡಲು ಸಾಧ್ಯವಿಲ್ಲ. ಏಕೆಂದರೆ, ಶಾಸಕರ ರಾಜಿನಾಮೆ ಅಂಗೀಕಾರವಾದರೂ ಅಥವಾ ಅವರನ್ನು ಅನರ್ಹಗೊಳಿಸಿದರೂ ವಿಧಾನಸಭೆಯ ಸದಸ್ಯ ಬಲ 209ಕ್ಕೆ ಇಳಿಯುತ್ತದೆ. ಸರ್ಕಾರದ ಸಂಖ್ಯಾಬಲ 102ಕ್ಕೆ ಕುಸಿಯಲಿದ್ದು, ಈಗಾಗಲೇ ರಾಜಿನಾಮೆ ನೀಡಿರುವ ಇನ್ನಿಬ್ಬರು ಶಾಸಕರು ಸದನಕ್ಕೆ ಹಾಜರಾಗದಿದ್ದರೆ ಅದು 100ಕ್ಕೆ ಇಳಿಯಲಿದೆ. 107 ಸದಸ್ಯಬಲ (ಇಬ್ಬರು ಪಕ್ಷೇತರರ ಬೆಂಬಲ) ಹೊಂದಿರುವ ಪ್ರತಿಪಕ್ಷ ಬಿಜೆಪಿ ಕೈ ಮೇಲಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ